ಪ್ರತಿಷ್ಠೆಗಾಗಿ ಪೈಪೋಟಿ ಬೇಡ: ಮೊಯಿಲಿ

ಬೆಂಗಳೂರು, ಜು. ೩೦- ಪಕ್ಷದ ಸಿದ್ಧಾಂತ ಚೌಕಟ್ಟು ಬಿಟ್ಟು ವ್ಯಕ್ತಿಗತವಾಗಿ ನಾಯಕತ್ವಕ್ಕೆ ಪೈಪೋಟಿ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಲಿ ಕಿವಿ ಮಾತು ಹೇಳಿದರು.
ಯಲಹಂಕ ಕ್ಷೇತ್ರದ ದೊಡ್ಡಬ್ಯಾಲಕೆರೆಯಲ್ಲಿ ಆಯೋಜಿಸಿದ್ದ ಚೈತನ್ಯ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಸಂಗಟನೆಯಲ್ಲಿ ನಾಯಕತ್ವದ ಪೈಪೋಟಿ ಪಕ್ಷದ ಘನತೆ, ಪಕ್ಷದ ವರ್ಚಸ್ಸಿಗೆ ತೊಡಕಾಗಬಾರದು ಎಂದರು.
ಹೈಕಮಾಂಡ್ ಆದೇಶದಂತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ಇಲ್ಲಿ ಯಾವುದೇ ವ್ಯಕ್ತಿಯ ವೈಯಕ್ತಿಕ ಅನಿಸಿಕೆಗಳಿಗಾಗಲಿ, ಹಿತಾಸಕ್ತಿಗಳಿಗಾಗಲಿ ಹೆಚ್ಚಿನ ಮನ್ನಣೆ ಇಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ಈಗಾಗಲೇ ಪ್ರತಿ ಬ್ಲಾಕ್ ಮಟ್ಟದಲ್ಲಿ ಸ್ಥಳೀಯ ಮುಖಂಡರ ಸಭೆ ಕರೆದು ಸ್ಥಳೀಯ ಸಮಸ್ಯೆಗಳ ಆಲಿಸಿ ಸೂಕ್ತ ರೀತಿಯ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಯಲಹಂಕದ ದಾಸಾನುಪುರದಲ್ಲಿ ಸಭೆ ನಡೆಸಿ ಕುಂದುಕೊರತೆ ಆಲಿಸಲಾಗಿದೆ.ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಇದೇ ರೀತಿಯಲ್ಲಿ ಸಭೆ ಕರೆದು, ಪಕ್ಷದ ಸಂಘಟನೆಯ ಜತೆಗೆ ಸೈದ್ಧಾಂತಿಕವಾಗಿ ಬೂತ್ ಮಟ್ಟದ ಕಾರ್ಯಕರ್ತರನ್ನು ಪಕ್ಷ ಸಂಘಟನೆಗೆ ಮಾಡಲಾಗುವುದು.
ಎದುರಾಳಿ ಎಂಥವರೇ ಇರಲಿ, ನಮ್ಮ ಪಕ್ಷದ ಸಂಘಟನೆಯನ್ನು ಪ್ರಾಮಾಣಿಕ ರೀತಿಯಲ್ಲಿ ಸುಭದ್ರ ಪಡಿಸಿಕೊಂಡರೆ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದುವರೆಗೆ ಪಡೆದಿರುವ ಮಾಹಿತಿಯ ಪ್ರಕಾರ ಯಲಹಂಕ ಭಾಗದಲ್ಲಿ ಪೊಲೀಸ್ ದೌರ್ಜನ್ಯ ಹೆಚ್ಚಾಗಿದ್ದು, ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಲಹಂಕ ಕ್ಷೇತ್ರ ಚುನಾವಣಾ ಉಸ್ತುವಾರಿ ಧರ್ಮಸೇನ, ಕಾಂಗ್ರೆಸ್ ಮುಖಂಡರಾದ ಎಂ.ಎನ್.ಗೋಪಾಲಕೃಷ್ಣ, ಕೇಶವರಾಜಣ್ಣ, ಎಸ್.ಬಿ.ಬಾಷಾ, ಯಲಹಂಕ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಎಂ.ಶ್ರೀನಿವಾಸ್, ಯಲಹಂಕ ಬ್ಲಾಕ್ ಅಧ್ಯಕ್ಷ ಶ್ರೀಧರ್, ದಾಸನಪುರ ಬ್ಲಾಕ್ ಅಧ್ಯಕ್ಷ ಜಯರಾಮಯ್ಯ, ಹೆಸರುಘಟ್ಟ ಬ್ಲಾಕ್ ಅಧ್ಯಕ್ಷ ನಾಗರಾಜ್‌ಗೌಡ, ಕೆಪಿಸಿಸಿ ಮಾಧ್ಯಮ ವಕ್ತಾರ ಮಂಜುನಾಥ್ ಅದ್ದೆ, ಮಾಜಿ ಜಿ.ಪಂ.ಸದಸ್ಯರಾದ ಲಾವಣ್ಯ ನರಸಿಂಹಮೂರ್ತಿ, ರಂಗಸ್ವಾಮಿ, ಮುಖಂಡರಾದ ಎಸ್.ಜಿ.ನರಸಿಂಹಮೂರ್ತಿ, ರಾಜಕುಮಾರ್ ಇನ್ನಿತರರಿದ್ದರು.