ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಮೇಲೆ ಐಟಿ ದಾಳಿ

ನಗರದ ಅರಮನೆ ಮೈದಾನದಲ್ಲಿರುವ ಶ್ರೀ ಕೃಷ್ಣದೇವರಾಯ ಶಿಕ್ಷಣ ದತ್ತಿ ಮೇಲೆ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿ, ತಪಾಸಣೆ ನಡೆಸಿದ್ದಾರೆ.

ಬೆಂಗಳೂರು,ಜೂ.೨೩-ತೆರಿಗೆ ವಂಚನೆಯ ವಿರುದ್ಧ ಸಮರ ಸಾರಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ಮುಂಜಾನೆಯಿಂದ ನಗರದಲ್ಲಿ ಹೆಚ್ಚು ಹಣ ಸಂಪಾದಿಸಿ ತೆರಿಗೆ ಪಾವತಿಸದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಮೇಲೆ ಇಂದು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ಬಾಗಲೂರಿನಲ್ಲಿರುವ ರೇವಾ ಶಿಕ್ಷಣ ಸಂಸ್ಥೆ, ದಿವ್ಯಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್,ಹುಣಸಮಾರಹಳ್ಳಿಯ ಕೃಷ್ಣದೇವರಾಯ ಇನ್‌ಸ್ಟಿಟ್ಯೂಟ್ ಸೇರಿ ಸರ್ಚ್ ವಾರೆಂಟ್ ಪಡೆದು ೪೫ ಕ್ಕೂ ಹೆಚ್ಚು ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಕಾಲೇಜು ಅಲ್ಲದೇ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರ ಮನೆ ಮೇಲೂ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸುಮಾರು ಎಪ್ಪತ್ತು ವಾಹನಗಳಲ್ಲಿ ಬಂದ ಕರ್ನಾಟಕ ಗೋವಾ ವಲಯದ ೨೫೦ಕ್ಕೂ ಐಟಿ ಅಧಿಕಾರಿಗಳು ಮುಂಜಾನೆಯಿಂದ ನಡೆಸಿರುವ ಏಕಕಾಲದ ದಾಳಿ ಮಧ್ಯಾಹ್ನದವರೆಗೆ ಮುಂದುವರೆದಿದೆ.
ವಿದೇಶಿ ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಶುಲ್ಕ ಸಂಗ್ರಹ ಮಾಡಿರುವುದು,ಸರ್ಕಾರದ ನಿಯಮಾವಳಿಗಳನ್ನ ಮೀರಿ ಪೇಮೆಂಟ್ ಕೋಟಾ ಸೀಟ್‌ಗಳನ್ನು ಮ್ಯಾನೇಜ್‌ಮೆಂಟ್‌ಗಳು ಬ್ಲಾಂಕಿಂಗ್ ಮಾಡಿ ಹೆಚ್ಚಿಸಿರುವ ಆರೋಪಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ
ಇದಲ್ಲದೇ ಅಕ್ರಮವಾಗಿ ಸಂಗ್ರಹಿಸಲಾದ ಹಣದ ಮಾಹಿತಿ ಐಟಿಗೆ ಒದಗಿಸದೆ ತೆರಿಗೆ ವಂಚನೆ ಮಾಡಿರುವ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಐಟಿ ಅಧಿಕಾರಿಗಳು ಎಂಬೆಸ್ಸಿ ಗ್ರೂಪ್ ಮೇಲೆ ೩೦ಕ್ಕೂ ಹೆಚ್ಚು ಕಡೆ ಅಲ್ಲದೇ ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್‌ಗಳ ಮನೆ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

  • ಆದಾಯ ತೆರಿಗೆ ವಂಚನೆ ಮಾಡಿದ ಆರೋಪ
  • ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ
  • ರೇವಾ ಶಿಕ್ಷಣ ಸಂಸ್ಥೆ, ದಿವ್ಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮೇಲೆ ದಾಳಿ
  • ವಿದೇಶಿ ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಿನ ಹಣ ವಸೂಲಿ