ಪ್ರತಿವರ್ಷ ತಂಬಾಕು ಉತ್ಪನ್ನಗಳ ನೇರ ಸೇವನೆಯಿಂದ 10 ಲಕ್ಷ ಜನರ ಸಾವು

ಸಂಜೆವಾಣಿ ವಾರ್ತೆ

ಚಿತ್ರದುರ್ಗ, ಮೇ. 31 – ವಿಶ್ವಾದ್ಯಂತ ಪ್ರತಿವರ್ಷ ತಂಬಾಕು ಉತ್ಪನ್ನಗಳ ನೇರ ಸೇವನೆಯಿಂದ 10 ಲಕ್ಷ ಜನರು ಮೃತರಾದರೆ, ಪರೋಕ್ಷ ಸೇವನೆಯಿಂದ ಸುಮಾರು 2 ಲಕ್ಷದಷ್ಟು ಜನರ ಜೀವಹಾನಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು ಜಿಲ್ಲಾ ಹಿರಿಯ ಸಿವಿಲ್ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಗೌರವಾನ್ವಿತ ನ್ಯಾಯಾಧೀಶರಾದ ಎಂ. ವಿಜಯ್‌ರವರು ಹೇಳಿದರು.ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ಎಸ್.ಜೆ.ಎಂ. ದಂತ ಮಹಾವಿದ್ಯಾಲಯ, ಯೂತ್ ರೆಡ್‌ಕ್ರಾಸ್ ಯುನಿಟ್, ಎಒಎಂಎಸ್‌ಐ, ಕೆಎಒಎಂಎಸ್‌ಐ, ಚಿತ್ರದುರ್ಗ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಚಿತ್ರದುರ್ಗ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆದ ವಿಶ್ವ ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು .ತಂಬಾಕು, ಬೀಡಿ-ಸಿಗರೇಟು, ಇ-ಸಿಗರೇಟ್ ಇನ್ನಿತರೆ ತಂಬಾಕು ಪದಾರ್ಥಗಳು ವಾತಾವರಣವನ್ನು ಕಲುಷಿತಗೊಳಿಸುವುದಲ್ಲದೆ ಮಾನವನ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಯುವಜನತೆ, ವಿದ್ಯಾರ್ಥಿಗಳು, ಅನಕ್ಷರಸ್ಥರು, ದುಡಿಯುವ ವರ್ಗದವರು ದುಶ್ಚಟಗಳ ಬಗ್ಗೆ ಜಾಗೃತರಾಗಿ ಆರೋಗ್ಯ ಕಾಪಾಡಿಕೊಳ್ಳುವುದರತ್ತ ಗಮನಹರಿಸುವಂತೆ ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಮಾತನಾಡಿ, ತಂಬಾಕು ಮತ್ತು ತಂಬಾಕಿನ ಉಪಉತ್ಪನ್ನಗಳ ಬಳಕೆಯಿಂದ ವಿವಿಧ ರೀತಿಯ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳು ಬರುವ ಸಾಧ್ಯತೆಯಿರುತ್ತದೆ. ಇವು ಯುವಪೀಳಿಗೆಯ ಮೇಲೆ ದುಷ್ಪÀರಿಣಾಮ ಬೀರುತ್ತವೆ. ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರವಹಿಸಬೇಕೆಂದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಗಾಯತ್ರಿ ಶಿವರಾಂ ರೆಡ್‌ಕ್ರಾಸ್ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು.ಮುಖ್ಯಅತಿಥಿ ಡಾ. ಆರ್. ಗೌರಮ್ಮ ಮಾತನಾಡುತ್ತ, ಕಾಲೇಜಿನ ವತಿಯಿಂದ ಬಾಯಿ ಮತ್ತು ದಂತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ಆಯೋಜಿಸಿದ್ದು ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.