ಪ್ರತಿಯೊಬ್ಬ ಸರಕಾರಿ ನೌಕರರು ವೃತ್ತಿ ಬುನಾದಿ ತರಬೇತಿ ಪಡೆಯಬೇಕು

ಗದಗ, ನ 26: ಸರಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ನೌಕರರು ಸರಕಾರದ ನೀತಿ ನಿಯಮಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲು ಸೇವೆಗೆ ಸೇರಿದ ಆರು ತಿಂಗಳುಗಳ ಒಳಗಾಗಿ ಕಡ್ಡಾಯವಾಗಿ ಸಮಗ್ರ ವೃತ್ತಿಬುನಾದಿ ತರಬೇತಿಯನ್ನು ಪಡೆದುಕೊಳ್ಳಬೇಕು ಎಂದು ಗದಗ ಜಿಲ್ಲಾ ತರಬೇತಿ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಕರೆ ನೀಡಿದರು.
ಅವರು ಇತ್ತೀಚೆಗೆ ಗದಗ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ-122 ಗದಗ ಜಿಲ್ಲಾ ತರಬೇತಿ ಸಂಸ್ಥೆಯ ವತಿಯಿಂದ ಗದಗ ಜಿಲ್ಲೆಯ ವಿವಿಧ ಇಲಾಖೆಯ ಗ್ರೂಪ್ ಸಿ ವೃಂದದ ಲಿಪಿಕ ಸಿಬ್ಬಂದಿಗಳಿಗೆ ಹಮ್ಮಿಕೊಳ್ಳಲಾದ ಸಮಗ್ರ ವೃತ್ತಿ ಬುನಾದಿ ತರಬೇತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವ್ಯವಸ್ಥಾಪಕ ಸಮಿತಿ ಸದಸ್ಯರು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೋವಿಡ್-19 ಪರಿಸ್ಥಿತಿಯಲ್ಲಿ 45 ದಿನಗಳ ಕಾಲ ತರಬೇತಿಗೆ ಸಿಬ್ಬಂದಿಗಳನ್ನು ನಿಯೋಜಿಸುವುದರಿಂದ ಕಛೇರಿ ಕೆಲಸಗಳಿಗೆ ತೊಂದರೆಯಾಗುವುದು ಸಹಜ ಆದರೆ ಪ್ರತಿಯೊಬ್ಬ ನೌಕರರು ವೃತ್ತಿಬುನಾದಿ ತರಬೇತಿಯನ್ನು ಪಡೆದುಕೊಂಡಲ್ಲಿ ಸರಕಾರದ ಕಾರ್ಯವೈಖರಿ ಹಾಗೂ ನಿಯಮಗಳ ಕುರಿತು ಜ್ಞಾನವನ್ನು ಹೊಂದಿ ಮುಂದಿನ ದಿನಮಾನಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವುದು. ಆದುದರಿಂದ ತರಬೇತಿಗೆ ಹಾಜರಾದ ಪ್ರಶಿಕ್ಷಣಾರ್ಥಿಗಳು ತರಬೇತಿಯಲ್ಲಿ ತಿಳಿಸುವ ಎಲ್ಲಾ ನಿಯಮ ಮತ್ತು ಅಂಶಗಳನ್ನು ಅರಿತುಕೊಂಡು ತಮ್ಮ ತಮ್ಮ ಕಛೇರಿಯಲ್ಲಿ ತ್ವರಿತ ಹಾಗೂ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಪ್ರಶಿಕ್ಷಣಾರ್ಥಿಗಳಿಗೆ ಸೂಚಿಸಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕವಿತಾಎ.ಎಸ್. ರವರು ಸ್ವಾಗತಿಸಿ ಮಾತನಾಡಿ ಕೋವಿಡ್-19 ಸಂದರ್ಭದಲ್ಲಿ ಗದಗ ಜಿಲ್ಲಾ ತರಬೇತಿ ಸಂಸ್ಥೆಯ ವತಿಯಿಂದ ಆನ್ ಲೈನ್ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವೃತ್ತಿಬುನಾದಿ ತರಬೇತಿಯನ್ನು ಮುಖಾಮುಖಿ ಕೈಗೊಳ್ಳಲು ಆಡಳಿತ ತರಬೇತಿ ಸಂಸ್ಥೆಯನಿರ್ದೇಶನವಿರುವುದರಿಂದ ಕೋವಿಡ್-19 ಮಾರ್ಗಸೂಚಿಗಳನ್ವಯ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಈ ವೃತ್ತಿಬುನಾದಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಎನ್.ಎಸ್. ಸೋನೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಆಗಮಿಸಿದ ಪ್ರಶಿಕ್ಷಣಾರ್ಥಿಗಳು, ಜಿಲ್ಲಾ ತರಬೇತಿ ಸಂಸ್ಥೆಯ ಬೋಧಕರಾದ ಎನ್.ಜಿ.ದೊಡಮನಿ, ಎಸ್.ಎಂ.ಸುಣಗಾರ, ಎಸ್.ವ್ಹಿ. ಯಳವತ್ತಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.