ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೯; ಸಾಧನ-ಸಲಕರಣೆಗಳ ಗುರುತಿಸುವಿಕೆ ಶಿಬಿರದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ವಿಕಲಚೇತನರು ತಪ್ಪದೇ ತಪಾಸಣೆ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಹೇಳಿದರು.ನಗರದ ಗುರುಭವನದ ಮುಂಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೆಷನ್ ಆಫ್ ಇಂಡಿಯಾ (ಅಲಿಂಕೋ) ವತಿಯಿಂದ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಸಾಧನ- ಸಲಕರಣೆಗಳ ಗುರುತಿಸುವಿಕೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ದೈಹಿಕ, ದೃಷ್ಠಿದೋಷ, ಶ್ರವಣದೋಷ ಹಾಗೂ ವಿವಿಧ ರೀತಿಯ ವಿಶೇಷ ಚೇತನರಿಗೆ ಪ್ರತ್ಯೇಕ ಕೊಠಡಿಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ನೋಂದಣಿ ಮಾಡಿಸಿಕೊಂಡ ವಿಕಲಚೇತನರಿಗೆ 15 ರಿಂದ 20 ದಿನಗಳ ಒಳಗಾಗಿ ನಿಮ್ಮ ಮೊಬೈಲ್‍ಗೆ ಸಂದೇಶ ರವಾನೆಯಾಗಲಿದ್ದು, ಆಗ ಸಾಧನ ಸಲಕರಣೆಗಳನ್ನು ಪಡೆದುಕೊಳ್ಳಬೇಕು ಎಂದರು.ಶಿಬಿರದಲ್ಲಿ ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ ವಿವಿಧ ಬಗೆಯ ವಿಶೇಷ ಚೇತನರು ಶಿಬಿರದಲ್ಲಿ ಭಾಗಿಯಾಗಿ ನ್ಯೂನತೆಯ ಅಗತ್ಯಕ್ಕೆನುಗುಣವಾಗಿ ಉಚಿತ ಕೃತಕ ಉಪಕರಣಗಳನ್ನು ಪಡೆಯಲು ಶಿಬಿರದಲ್ಲಿ ಪಾಲ್ಗೊಂಡು ಪರೀಕ್ಷೆಗೆ ಒಳಗಾದರು.ಈ ಸಂದರ್ಭದಲ್ಲಿ ಬಿಆರ್‍ಪಿ ರಾಜೀವ್, ಬಿಆರ್‍ಸಿ ರಾಜು, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿವಿ.ಕೆ.ಶಂಕರಪ್ಪ, ಎಂಆರ್‍ಡಬ್ಲ್ಯೂ ಮೈಲಾರಪ್ಪ, ಅಲಿಂಕೋ ವ್ಯವಸ್ಥಾಪಕ ಅಭಿಷೇಖ್ ಸೇರಿದಂತೆ ವಿಆರ್‍ಡಬ್ಲ್ಯೂ, ಯುಆರ್‍ಡಬ್ಲ್ಯೂ, ವಿಕಲಚೇತರು ಭಾಗವಹಿಸಿದ್ದರು.