ಪ್ರತಿಯೊಬ್ಬ ಯುವಕರಿಗೂ ಆದರ್ಶ ವಿವೇಕಾನಂದರು

ಮೈಸೂರು:ಜ:12: ಸ್ವಾಮಿ ವಿವೇಕಾನಂದರ ಆದರ್ಶ, ತತ್ವಗಳು ಇಂದಿನ ಯುವ ಜನತೆಗೆ ದಾರಿದೀಪದಂತಿದೆ ಎಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅಭಿಪ್ರಾಯಪಟ್ಟರು.
ಅವರು ಇಂದು ಬೆಳಿಗ್ಗೆ ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ವಿವೇಕಾನಂದರ ಸ್ಮಾರಕ ಬಳಿ ಮೈಸೂರಿನ ಜೈಹಿಂದ್ ಯುವ ಸಂಘಟನೆ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದರು ನಮ್ಮ ದೇಶದ ದೊಡ್ಡ ಆಸ್ತಿ. ಅವರ ತತ್ವಗಳಲ್ಲೊಂದಾದ “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬುದನ್ನು ಇಂದಿನ ಯುವ ಜನತೆ ಪಾಲಿಸಿದರೆ ಇಡೀ ರಾಷ್ಟ್ರವೇ ಪ್ರಗತಿ ಹೊಂದುತ್ತದೆ ಎಂದರು.
ವಿವೇಕಾನಂದರು ಜೀವಂತವಿದ್ದಾಗ ಅಮೇರಿಕಾ ಸಂಯುಕ್ತ ಸಂಸ್ಥಾನಲ್ಲಿನ ನಗರವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಅವರು ಧರಿಸಿದ್ದ ಉಡುಪುಗಳ ಬಗ್ಗೆ ಕುಚೋದ್ಯ ರೀತಿಯಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ವಿವೇಕಾನಂದರು ತಮ್ಮ ಭಾಷಣದ ಮದ್ಯದಲ್ಲಿ ನಮ್ಮ ಸಂಪ್ರದಾಯದಂತೆ ಉಡುಪನ್ನು ಧರಸಿದ್ದೇನೆ. ಆದರೆ ನಾನು ನನ್ನ ಪಾದದಲ್ಲಿ ಧರಿಸಿರುವ ಪಾದರಕ್ಷೆಗಳು ಎಲ್ಲಿ ಎಲ್ಲಿ ಎರಬೇಕೆಂಬುದನ್ನು ಎಲ್ಲರೂ ಬಲ್ಲರು. ಅದಕ್ಕೆ ಅಷ್ಟೊಂದು ಮಹತ್ವವನ್ನು ಯಾರೂ ನೀಡುವುದಿಲ್ಲ. ಬುದ್ಧಿ ಇಲ್ಲದವರು ಮಾತ್ರ ಅದಕ್ಕೆ ಮಹತ್ವ ನೀಡುತ್ತಾರೆ, ಇದನ್ನು ಎಲ್ಲರು ಅರಿತುಕೊಳ್ಳಬೇಕೆಂದು ತಮ್ಮನ್ನು ಕುರಿತು ಕುಚೋದ್ಯ ರೀತಿಯಲ್ಲಿ ಹೇಳಿದ ಕಿಡಿಗೇಡಿಗಳಿಗೆ ಮಾರ್ಮಿಕವಾಗಿ ತಿರುಗೇಟು ನೀಡಿರುವುದು ಇಂದಿಗೂ ಭಾರತಿಯರ ಘನತೆಗೆ ಹಿಡಿದ ಕೈಗನ್ನಡಿಯಂತಿದ್ದು, ಇಂತಹ ಮಹಾನ್ ವ್ಯಕ್ತಿಗಳನ್ನು ನಾವೆಲ್ಲರು ನೆನಪು ಮಾಡಿಕೊಳ್ಳುವುದು ಅದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದ ಅಂಗವಾಗಿ ಜೈಹಿಂದ್ ಯುವ ಸಂಘಟನೆ ವತಿಯಿಂದ ಸ್ವಾಮಿ ವಿವೇಕಾನಂದರ ಆದರ್ಶ, ತತ್ವ ಸಂದೇಶಗಳನ್ನೊಳಗೊಂಡ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಪ್ರಮೀಳಭರತ್, ಹಿರಿಯ ಸಮಾಜ ಸೇವಕರಾದ ಕೆ. ರಘುರಾಂ ವಾಜಪೇಯಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜೈಹಿಂದ್ ಯುವ ಸಂಘಟನೆ ಅಧ್ಯಕ್ಷ ಅಜಯ್‍ಶಾಸ್ತ್ರಿ ಇತರರು ಇದ್ದರು.