ಪ್ರತಿಯೊಬ್ಬ ಯುವಕನ ಕನಸು ಭಾರತೀಯ ಸೇನೆ ಸೇರುವುದಾಗಿರಲಿ: ಯೋಧ ಚಿದ್ರಿಲಕ್ಷ್ಮಿನಾರಾಯಣ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಆ.6: ಯುವಕರು ಭಾರತೀಯ ಸೇನೆಯನ್ನು ಸೇರುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕೆಂದು ಭಾರತೀಯ ಗಡಿ ಭದ್ರತಾ ಪಡೆಯ(ಬಿ.ಎಸ್.ಎಫ್)ನಿವೃತ್ತ ಯೋಧ ಚಿದ್ರಿ ಲಕ್ಷ್ಮೀನಾರಾಯಣ ಯುವಕರಿಗೆ ಕರೆ ನೀಡಿದರು.
ಅವರು ಪಟ್ಟಣದ ಶ್ರೀ ನಾಣಿಕೆರೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ಸುಲೆಮಾನ್ ಮತ್ತು ಚಿದ್ರಿ ಲಕ್ಷ್ಮೀನಾರಾಯಣರವರಿಗೆ ಪಟ್ಟಣದ ಸಮಾನ ಮನಸ್ಕರ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶದ ರಕ್ಷಣೆ ಹಾಗೂ ಸೇವೆಯ ಕುರಿತು ಪ್ರತಿಯೊಬ್ಬರಲ್ಲೂ ಪ್ರಜ್ಞೆ ಮೂಡಬೇಕು. ಅಲ್ಲದೇ ಇಂದಿನ ಯುವಕರು ಸರ್ಕಾರಿ ಉದ್ಯೋಗ ಬಯಸದೆ, ದೇಶ ಸೇವೆಯನ್ನು ಸಲ್ಲಿಸಲು ಸೇನೆಗೆ ಸೇರಿ ಎಂದು ಯುವಕರಿಗೆ ಕರೆ ನೀಡಿದರು.
ಸೇನೆಯ ಸೇವಾವಧಿಯಲ್ಲಿ ನಮಗೆ ಯಾವುದೇ ಜಾತಿ,ಧರ್ಮಗಳಿರುವುದಿಲ್ಲ ನಮಗೆ ದೇಶ ಮುಖ್ಯವಾಗಿರುತ್ತದೆ ಎಂದರು. ನಮ್ಮ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಿಂದ ಅಧಿಕ ಯುವಕರು ಸೇನೆಗೆ ಸೇರಬೇಕು. ದೇಶಕ್ಕೆ ಅತಿಹೆಚ್ಚು ಸೈನಿಕರನ್ನು ನೀಡಿದ ಕೀರ್ತಿಗೆ ನಮ್ಮೂರು ಪಾತ್ರರಾಗಬೇಕು ಎಂದು ತಮ್ಮ ಮನದಾಳದ ಇಚ್ಛೆಯನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಸನ್ಮಾನ ಕಾರ್ಯಕ್ರಮದ ನೇತೃತ್ವವಹಿಸಿದ್ದ ಸಮಾಜ ಸೇವಕ ಚಿದ್ರಿ ಸತೀಶ ಮಾತನಾಡಿ, ಸಮಾಜೋಪಯೋಗಿ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಸದಾ ಇದ್ದು, ಯುವಕರು ಸದಭಿರುಚಿಗಳನ್ನು ಬೆಳೆಸಿಕೊಳ್ಳಬೇಕಿದೆ. ತಾಯ್ನಾಡಿಗೆ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಆಗಮಿಸಿದ ಸೈನಿಕರಿಗೆ ಗೌರವಿಸುವುದು ನಮ್ಮ ಸೌಭಾಗ್ಯವಾಗಿದೆ ಎಂದರು. ಸೇವಾ ನಿವೃತ್ತ ಸುಲೆಮಾನ್ ರು ವೇದಿಕೆಯಲ್ಲಿ ತಮ್ಮ ಸೇವಾವಧಿಯ ರೋಚಕ ಕ್ಷಣಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಮಂಜಮ್ಮಜೋಗ್ತಿ, ಚಿದ್ರಿ ಗಿರಿಜಾ ಬಾಯಿ, ಡಿ.ರಾಘವೇಂದ್ರ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯ ಗೋವಿಂದರ ಪರಶುರಾಮ, ಪ.ಪಂ.ಸದಸ್ಯರಾದ ಬೆಣಕಲ್ ಬಾಷ, ಮುತ್ತಾವಲಿ ಫಕೃಸಾಬ್, ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ರಾಮಮೂರ್ತಿ, ಡಾ.ಪಿ.ವಿಜಯವೆಂಕಟೇಶ, ಉದ್ಯಮಿ ಕೀರ್ತಿರಾಜ್, ಎ.ಸುಭಾನ್ ಸಾಬ್, ನಿವೃತ್ತ ಯೋಧ ಜುಬೇರ್, ಹನುಮಂತಪ್ಪ, ಕೆ.ಎಸ್.ಆರ್.ಪಿ. ಯೋಧ ದಾಸರ ಪರಶುರಾಮ,ವಾಸವಿ ಮಹಿಳಾ ಸಮಾಜದ ವಿಜಯಲಕ್ಷ್ಮಿ ಸತ್ಯನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾನ ಮನಸ್ಕರ ವೇದಿಕೆಯ ಎ.ರಹಿಮಾನ್, ಪಿ. ರಾಮಚಂದ್ರ, ಬಿ. ರಾಘವೇಂದ್ರ, ಗಣೇಶ್, ರೇವಣ್ಣ, ರಾಘವೆಂದ್ರ ಕುಪ್ಪ, ಇರ್ಫಾನ್, ಮೆಹಬೂಬ್ ಪಾಶ, ಇಮಾಂ ಸಾ, ಪಕ್ಕೀರಪ್ಪ ಹಾಗೂ ಇತರರು ಇದ್ದರು. ಕಾರ್ಯಕ್ರಮವನ್ನು ಪಿ. ರಾಮಚಂದ್ರ ನಿರ್ವಹಿಸಿದರು.
ಇದಕ್ಕೂ ಮುನ್ನ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ಸುಲೆಮಾನ್ ಮತ್ತು ಚಿದ್ರಿ ಲಕ್ಷ್ಮೀನಾರಾಯಣರವರಿಗೆ ಭಾರತೀಯ ಗಡಿಭದ್ರತಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ಸುಲೆಮಾನ್ ಮತ್ತು ಚಿದ್ರಿ ಲಕ್ಷ್ಮೀನಾರಾಯಣರವರಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಬಾಕ್ಸ್ ಐಟಮ್
“ಮನೆಗೊಬ್ಬರು ಭಾರತೀಯ ಸೇನೆಗೆ ಸೇರಿ, ಜೊತೆಗೆ ಯುವಕರು ಸೇನೆಗೆ ಸೇರಲು ಪೋಷಕರು ಪ್ರೇರಣೆ ನೀಡಲು ಮುಂದಾಗಬೇಕು.ಅಲ್ಲದೆ ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಸಸಿಗಳನ್ನು ನೆಟ್ಟು ಉತ್ತಮ ಪ್ರಕೃತಿಯ ಬೆಳವಣಿಗೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ.”
ಸುಲೆಮಾನ್. ನಿವೃತ್ತ.ಬಿ.ಎಸ್.ಎಫ್.ಯೋಧ.