ಪ್ರತಿಯೊಬ್ಬ ನಾಗರಿಕ ಕಾನೂನಿನ ಅರಿವು ಹೊಂದಿರಬೇಕು

ಬಸವನಬಾಗೇವಾಡಿ:ನ.14: ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕಾನೂನಿನ ಬಗ್ಗೆ ಅರಿವಿರಬೇಕು. ಅಂದಾಗ ಮಾತ್ರ ಸಮಾಜದಲ್ಲಾಗುವ ಅಪರಾದಗಳನ್ನು ತಡೆಯಲು ಸಾಧ್ಯ ಎಂದು ಹಿರಿಯ ಸಿವ್ಹಿಲ ನ್ಯಾಯಾದೀಶ ಪ್ರಕಾಶ ಅರ್ಜುನ ಬನಸೋಡೆ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಕಚೇರಿ ಸಭಾಭವನದಲ್ಲಿ ಶನಿವಾರ ತಾಲೂಕಾ ಆಡಳಿತ, ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಹಾಗೂ ತಾಲೂಕಾ ಪಂಚಾಯತ ಕಾರ್ಯಲಯ ಸಹಯೋಗದಲ್ಲಿ ಸರ್ಕಾರಿ ಯೋಜನೆಗಳ ಅರಿವು, ಹಾಗೂ ಕಾನೂನು ಅರಿವು, ಸರ್ಕಾರಿ ಯೋಜನೆಗಳ ಅನುಕೂಲತೆಗಳ ಕುರಿತು ಹಮ್ಮಿಕೊಂಡ ಮೆಗಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾನೂನು ನಮ್ಮ ದೇಶದ ಪರಂಪರೆ, ಸಂಸ್ಕøತಿ ಧರ್ಮದ ಆಧಾರದ ಮೇಲೆ ರಚನೆಯಾಗಿದೆ. ಯಾರು ಕಾನೂನಿನ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅವಶ್ಯವಾಗಿದೆ. ದೇಶದಲ್ಲಿ ಅಜ್ಞಾನದ ಕೊರತೆಯಿಂದ ಅಪರಾದ ಪ್ರಕರಣಗಳು ಸಂಭವಿಸುತ್ತಿವೆ. ಹೀಗಾಗಿ ಹೊಸ ಹೊಸ ಕಾನೂನುಗಳು ಜಾರಿಯಾಗುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಸರ್ಕಾರ 6 ರಿಂದ 16 ವರ್ಷದ ವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಂಡು ಶಿಕ್ಷಣವಂತರಾಗಬೇಕು ಎಂದರು.
ಸಣ್ಣ ಪುಟ್ಟ ಸಮಸ್ಯೆಗಳಿಗಾಗಿ ಕೋರ್ಟಗಳಲ್ಲಿ ದಾವೆ ಹೂಡಿ ಕಾನೂನು ಹೋರಾಟ ಮಾಡುವ ಬದಲು ಕಾನೂನು ಸಮಿತಿಯಿಂದ ಪ್ರತಿ ತಿಂಗಳು ನಡೆಯುವ ಲೋಕ ಅದಾಲತ್‍ನಲ್ಲಿ ರಾಜಿ ಸಂದಾನ ಮಾಡಿಕೊಳ್ಳಬೇಕು. ರಾಜ್ಯ ಕಾನೂನು ಪ್ರಾಧಿಕಾರದಿಂದ ಕಾನೂನು ಸಲಹಾ ಸಮಿತಿಯನ್ನು ರಚಿಸಲಾಗಿದೆ. ಪ್ರತಿಯೊಬ್ಬರೂ ಉಚಿತವಾಗಿ ಕಾನೂನು ಸಲಹೆ ಹಾಗೂ ಸೇವೆಯನ್ನು ಪಡೆಯಬಹುದಾಗಿದೆ ಎಂದರು.
ಸಿವ್ಹಿಲ್ ನ್ಯಾಯಾಧೀಶ ಸಂದೀಪ ಅಪ್ಪಸಾಹೇಬ ನಾಯಿಕ ಮಾತನಾಡಿ, ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾನೂನು ಸೇವಾ ಸಮಿತಿಯಿಂದ ಸರ್ಕಾರಿ ಯೋಜನೆಗಳ ಕುರಿತು ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬರೂ ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ವಕೀಲ ರವಿ ರಾಠೋಡ ಉಪನ್ಯಾಸ ನೀಡಿದರು.
ಇದೇ ಸಂಧರ್ಭದಲ್ಲಿ ಪಿಂಚಣಿ ಮಂಜೂರಾತಿಯಾದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೇಡ್-2 ತಹಶೀಲ್ದಾರ ಪಿ.ಜೆ.ಪವಾರ, ವಕೀಲರ ಸಂಘದ ಅಧ್ಯಕ್ಷ ಎನ್.ಎಸ್.ಪಾಟೀಲ, ಜಿ.ಆರ್. ಬೀಳಗಿ, ವಿಜಯ ಕಲ್ಲೂರ, ಸಿಡಿಪಿಓ ಸಂತೋಷ ಮ್ಯಾಗೇರಿ ಇದ್ದರು.
ವೀರೇಶ.ಎಚ್.ಗುಡಲಮನಿ ಸ್ವಾಗತಿಸಿದ ನಿರೂಪಿದರು.