ಪ್ರತಿಯೊಬ್ಬ ತೃತೀಯ ಲಿಂಗಿಗಳು ಮತದಾರರ ಚೀಟಿ ಹೊಂದಿರಬೇಕು

ಮೈಸೂರು: ಮಾ.28:- ಜಿಲ್ಲೆಯಲ್ಲಿ 212 ಜನ ತೃತೀಯ ಲಿಂಗಿಗಳಿಗೆ ಮತದಾರರ ಚೀಟಿ ಇಲ್ಲವೆಂಬ ಮಾಹಿತಿ ಇದ್ದು ಎಲ್ಲಾ ತೃತೀಯ ಲಿಂಗಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಔಡು ಅರ್ಹ ಪ್ರತಿಯೊಬ್ಬ ತೃತೀಯ ಲಿಂಗಿಗಳು ಮತದಾರರ ಚೀಟಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್‍ನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತೃತೀಯಲಿಂಗಿಗಳಿಗೆ ಮತದಾರ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಚೀಟಿಯಲ್ಲಿ ಹೆಸರು ಬದಲಾವಣೆಗೆ ಪೂರಕವಾದ ದಾಖಲೆಗಳು ಅಗತ್ಯ. ತಕ್ಷಣಕ್ಕೆ ಅದು ಸಾಧ್ಯವಿಲ್ಲ. ಹೆಸರು ಬದಲಾವಣೆಗೆ ನೋಟರಿ ಮಾಡಿಸಿ ಕೋರ್ಟ್ನಲ್ಲಿ ತಿದ್ದುಪಡಿ ಮಾಡಿಸಿ ನಂತರ ಪತ್ರಿಕೆಯಲ್ಲಿ ಪ್ರಕಟ ಮಾಡಿಸಬೇಕು. ವಯಸ್ಸಿನ ಬದಲಾವಣೆಗೆ ದಾಖಲೆಗಳು ಬೇಕು. ಪ್ರಸ್ತುತ ವಿಳಾಸ ಮತ್ತು ಲಿಂಗದ ನೋಂದಣಿ ಬದಲಾವಣೆ ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಮ್ ಗಾಯತ್ರಿ ಅವರು ಮಾತನಾಡಿ ಚುನಾವಣೆ ಮುಗಿದ ನಂತರ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಹೆಸರು ಹಾಗೂ ಲಿಂಗ ನೋಂದಣಿ ಬದಲಾವಣೆ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ನ ಉಪ ಕಾರ್ಯದರ್ಶಿಗಳಾದ ಕೃಷ್ಣಂರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ-ನಿರ್ದೇಶಕರಾದ ಬಸವರಾಜು ಅವರನ್ನು ಒಳಗೊಂಡಔತೆ ಇತರರು ಉಪಸ್ಥಿತರಿದ್ದರು.