ಪ್ರತಿಯೊಬ್ಬರೂ ಸಹ ಧಾರ್ಮಿಕ ಭಾವನೆಯನ್ನು ಹೊಂದಬೇಕು

ಸಂಡೂರು:ಜ:13: ಪ್ರತಿಯೊಬ್ಬ ವ್ಯಕ್ತಿಯೂ ಸಹ ಧಾರ್ಮಿಕ ಭಾವನೆಯನ್ನು ಹೊಂದುವ ಮೂಲಕ ಮುಕ್ತಿಯನ್ನು ಪಡೆಯಬೇಕು, ಅದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ಇಂದು ತಾಲೂಕಿನ ಮುರಾರಿಪುರ ಗ್ರಾಮದಲ್ಲಿ ನೂತನ ಕೊಲ್ಲಾರಮ್ಮ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿ ದುಷ್ಟ ಸಂಹಾರ ಶಿಷ್ಟ ರಕ್ಷಣೆ ದೇವಿಯ ಪ್ರಮುಖ ಕಾರ್ಯವಾಗಿದ್ದು ನಾವು ಇಂದು ನೂತನ ದೇವಸ್ಥಾನದ ಸ್ಥಾಪಿಸುವುದರ ಜೊತೆಗೆ ದುಷ್ಟ ಗುಣಗಳನ್ನು ಸಂಹಾರ ಮಾಡಿಕೊಂಡು ಶಿಷ್ಟ ಮಾರ್ಗದಲ್ಲಿ ಸಾಗೋಣ, ಕಾರಣ ಸಮಾಜದಲ್ಲಿ ಪ್ರತಿಯೊಂದು ಮಗುವು ಸಹ ಶಿಕ್ಷಣ ಪಡೆಯುವ ಮೂಲಕ ಮನದಲ್ಲಿಯ ದುಷ್ಟಗುಣ ದೂರವಾಗುತ್ತವೆ, ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುವುದರ ಜೊತೆಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯನ್ನು ಸಾಧಿಸಿ ನಮ್ಮ ಮನದಲ್ಲಿಯ ಮೌಡ್ಯಗಳನ್ನು ದೂರಮಾಡಿಕೊಳ್ಳೋಣ, ಈ ದೇವಸ್ಥಾನ ಬರೀ ಒಬ್ಬರ ಆಸ್ತಿಯಲ್ಲ, ಸಮಾಜದ ಆಸ್ತಿಯಾಗಿದೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಇದನ್ನು ಸ್ವಚ್ಚವಾಗಿಡುವ ಕಾರ್ಯವನ್ನು, ರಕ್ಷಿಸುವ ಕೆಲಸವನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖಂಡ ಬಿ.ಜಿ. ಸಿದ್ದೇಶ್ ಅವರು ಮಾತನಾಡಿ ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಶ್ರದ್ಧಾಕೇಂದ್ರಗಳು, ಇದರಿಂದ ನಮ್ಮ ಮನದಲ್ಲಿಯ ಮಲೀನ, ಮೌಡ್ಯತೆಯನ್ನು ತೊಡೆದು ಹಾಕಿ ನೆಮ್ಮದಿಯ ಬದುಕನ್ನು ಸಾಗಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಗಂಗೆಯನ್ನು ತರುವ ಮೂಲಕ ದೇವಿಯ ಎಲ್ಲಾ ಪ್ರತಿಷ್ಠಾಪನಾ ವಿಧಿ ವಿಧಾನಗಳನ್ನು ನೆರವೇರಿಸಿದರು, ಅಲ್ಲದೆ ಇಡೀ ಗ್ರಾಮವೇ ದೇವಿಯ ದರ್ಶನಕ್ಕೆ ಅಗಮಿಸಿ ಪೂಜಿಸಿ ದೇವಿಯ ಕೃಪೆಗೆ ಪಾತ್ರರಾದರು, ಸಾಮೂಹಿಕ ದಾಸೋಹ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆಯಿತು, ಗ್ರಾಮದ ಮುಖಂಡರಾದ ಅನಂದಪ್ಪ, ಇತರ ಹಲವಾರು ಗಣ್ಯರು, ಯುವಕರುಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.