ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಿ: ಪೌರಾಯುಕ್ತ ರಾಮದಾಸ್

ಸಂಜೆವಾಣಿ ವಾರ್ತೆ
ಚಾಮರಾಜನಗರ,ಏ.08:- ಇದೇ ತಿಂಗಳು 26ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಿ ಸದೃಢ ಭಾರತ ನಿರ್ಮಾಣಕ್ಕೆ ಸಹಕರಿಸಿ ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರಸಭಾ ವ್ಯಾಪ್ತಿಯ ವಾರ್ಡ್ ನಂ.14ರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಜಾಥಾದಲ್ಲಿ ಸ್ತ್ರೀ ಶಕ್ತಿ ಸಂಘದ ಮಹಿಳಾ ಸದಸ್ಯರುಗಳು ವಾರ್ಡ್‍ನ ಪ್ರಮುಖ ಬೀದಿಗಳಲ್ಲಿ ಮೇಣದ ಬತ್ತಿ ಮೆರವಣಿಗೆ ಮಾಡಿದರು.
ನಗರಸಭೆ ಪೌರಾಯುಕ್ತ ರಾಮದಾಸ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26ಕ್ಕೆ ಮೊದಲ ಹಂತ, ಮೇ 7ಕ್ಕೆ 2ನೇ ಹಂತದ ಮತದಾನ ನಡೆಯಲಿದ್ದು, ಪ್ರತಿಯೊಬ್ಬರೂ ಕೂಡಾ ತಮ್ಮ ಮತದಾನ ಹಕ್ಕನ್ನು ಚಲಾಯಿಸಬೇಕು ಎಂದು ಅರಿವು ಮೂಡಿಸಿದರು.
ಚುನಾವಣಾ ಪರ್ವದೇಶ ದಗರ್ವ ಎಂಬ ಘೋಷವಾಕ್ಯದ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮತದಾನದ ಹಬ್ಬ ಇದೇ ತಿಂಗಳು 26ರಂದು ನಡೆಯಲಿದೆ. ಎಲ್ಲರೂ ಕೂಡಾ ತಪ್ಪದೇ ತಮ್ಮ ಬೂತ್‍ಗಳಲ್ಲಿ ಮತವನ್ನು ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಯೋಜನಾಧಿಕಾರಿ ವೆಂಕಟನಾಯಕ್ ಮಾತನಾಡಿ, ಏ.26 ರಂದು ಮತದಾನದ ಹಬ್ಬವನ್ನು ಆಚರಿಸುತ್ತಿದ್ದೇವೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಕೂಡಾ ಮತದಾನ ನೀಡುವ ಸಮಾನ ಹಕ್ಕನ್ನುಕೊಟ್ಟಿದೆ. ಎಲ್ಲರೂಕೂಡಾ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದರು.
ನಗರಸಭಾ ಸಿಆರ್‍ಪಿ ನರ್ಗೀಸ್ ಬಾನು ಮಾತನಾಡಿ, ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಸಮರ್ಥ ನಾಯಕರನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮತದಾನ ಎಂಬುದು ಎಲ್ಲರ ಸಾರ್ವಭೌಮ ಹಕ್ಕು ಅದನ್ನು ಪ್ರತಿಯೊಬ್ಬರೂ ಚಲಾಯಿಸುವ ಮೂಲಕ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆಮಾಡುವ ಮೂಲಕ ಸದೃಢ ಭಾರತ ನಿರ್ಮಾಣ ಮಾಡುವುದು ಎಲ್ಲರ ಕರ್ತವ್ಯ ಎಂದರು.
ನಗರಸಭಾ ಸಿಆರ್‍ಪಿ ಜ್ಯೋತಿಮಾತನಾಡಿ,ನಮ್ಮ ಮತ ನಮ್ಮ ಹಕ್ಕು ಎಂಬ ಘೋಷವಾಕ್ಯದೊಂದಿಗೆ ಪ್ರತಿ ಮನೆ ಮನೆಗೆ ಕ್ಯಾಂಡಲ್ ಮೆರವಣಿಗೆ ಮೂಲಕ ತೆರಳಿ ಪ್ರತಿಯೊಬ್ಬರೂ ಕೂಡಾ ತಪ್ಪದೆ ಮತದಾನ ಮಾಡಬೇಕು. ಹಾಗೂ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲುತಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರಾಮಚಂದ್ರು, ಕಂದಾಯ ಅಧಿಕಾರಿ ಶರವಣ, ಸಿಆರ್‍ಪಿ ರೂಪಾ, ಸಿಬ್ಬಂದಿಗಳಾದ ನವೀನ್ ಸೇರಿದಂತೆ ಮತ್ತಿತತರಿದ್ದರು.