ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ

ಹುಬ್ಬಳ್ಳಿ,ಏ5: ಮತದಾನ ಎಲ್ಲರ ಹಕ್ಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮೇ 7 ರಂದು ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ದಿವ್ಯಪ್ರಭು ಜಿ.ಆರ್.ಜೆ. ಹೇಳಿದರು.

ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಧಾರವಾಡ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮತದಾನ ಜಾಥಾ ಅಂಗವಾಗಿ ಸ್ತಬ್ಧ ಚಿತ್ರ ಹಾಗೂ ವಿಡಿಯೋ ವಾಹನ ಅನಾವರಣ ಕಾರ್ಯಕ್ರಮವನ್ನು ಬಲೂನ್ ಗಳನ್ನು ಹಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾನ ಎಂಬುದು ನಮ್ಮ ಪ್ರಜಾಪ್ರಭುತ್ವದ ಹಕ್ಕು. ಭಾರತದ ಪ್ರಜೆಗಳಾದ ನಾವು ಮತದಾನದ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸರಿಯಾದ ರೀತಿಯಲ್ಲಿ ಮತವನ್ನು ಚಲಾಯಿಸೋಣ ಎಂದರು.

ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಮತದಾರರ ಸಂಖ್ಯೆ ಕಡಿಮೆ ಇದೆ. ಎಲ್ಲೆಲ್ಲಿ ಮತದಾರರು ಕಡಿಮೆ ಇದ್ದಾರೆ ಅಲ್ಲಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಮೂಲಕ ಅವರನ್ನು ಮತಗಟ್ಟೆಗಳಿಗೆ ತರುವ ಕೆಲಸವನ್ನು ಕೈಗೊಳ್ಳುವ ಸಲುವಾಗಿ ಮತದಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಮತದಾನ ಜಾಗೃತಿ ಜಾಥಾ 82 ವಾರ್ಡಗಳಿಗೂ ತೆರಳಿ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಮತದಾರರು ಮತಗಟ್ಟೆಗೆ ಬಂದಾಗ ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ, ಬಿಸಿಲಿನ ತಾಪವಿರುವುದರಿಂದ ನೆರಳಿನ ವ್ಯವಸ್ಥೆ, ವೇಟಿಂಗ್ ಹಾಲ್, ಮಕ್ಕಳ ಖರ್ಚಿನ ವ್ಯವಸ್ಥೆ, ಅಂಗವಿಕಲರಿಗೆ ವ್ಹೀಲ್ ಚೇರ್ ವ್ಯವಸ್ಥೆ, ಬ್ರೈಡ್ ಲಿಪಿಯ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ. ಪ್ರತಿಯೊಬ್ಬರೂ ತಪ್ಪದೇ ಕಡ್ಡಾಯವಾಗಿ ಮೇ 7 ರಂದು ಮತ ಚಲಾಯಿಸಬೇಕು. ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ್ ಟಿ.ಕೆ, ಪೆÇಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಈಶ್ವರ್ ಉಳ್ಳಾಗಡ್ಡಿ, ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.