ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು; ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ.ಏ.೧೨: ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ಚುನಾವಣೆ ಪ್ರಕ್ರಿಯೆಯಿಂದ ಹೊರಗೆ ಉಳಿಯದೆ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಕರೆ ನೀಡಿದರು.ನಗರದ ಹೈಸ್ಕೂಲ್ ಮೈದಾನದಲ್ಲಿ ಚುನಾವಣಾ ಮತದಾರರ ಜಾಗೃತಿ ಅಂಗವಾಗಿ ಹಿರಿಯ ನಾಗರಿಕ, ವಿಕಲಚೇತನ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ  ವಿಕಲಚೇತನರ ತ್ರಿಚಕ್ರ ವಾಹನ ಯಾನಕ್ಕೆ‌ ಚಾಲನೆ ನೀಡಿ ಮಾತನಾಡಿದರು.ಅದರಲ್ಲೂ ವಿಶೇಷ ವಿಕಲಚೇತನರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.‌ಅವರೂ ಕೂಡ ಪ್ರಜಾಪ್ರಭುತ್ವದ ಒಂದು ಅಂಗ. ದೇಶವನ್ನು ಕಟ್ಟುವಲ್ಲಿ ವಿಕಲ ಚೇತನರ ಪಾತ್ರವೂ ಇದೆ. ಕಾರಣ ಮೇ 10 ರಂದು ನಡೆಯುವ ಚುನಾವಣೆ ವೇಳೆ ಎಲ್ಲರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕುನ್ನು ಚಲಾಯಿಸಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕೆಂದು ಕಿವಿಮಾತು ಹೇಳಿದರು.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಣ ಅಧಕಾರಿ, ಸ್ವೀಪ್ ಮುಖ್ಯಸ್ಥ ಸುರೇಶ ಹಿತ್ನಾಳ್ ಮಾತನಾಡಿ, ಮೇ 10ರಂದು ನಡೆಯುವ ಚುನಾವಣೆ ವೇಳೆ ವಿಕಲ ಚೇತನರಿಗೆ ಯಾವುದೇಸಮಸ್ಯೆ ಎದುರಾಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ‌. ವಿಕಲಚೇತನರಿಗೆ ರ್ಯಾಂಪ್, ರೀಲಿಂಗ್ ವ್ಯವಸ್ಥೆ, ಅಂಧರಿಗೆ ಬ್ರೈಲ್ ಲಿಪಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಇದಲ್ಲದೆ ವಿಕಲಚೇತನರನ್ನು ಮತಗಟ್ಟೆಗೆ ಕರೆದು ಕೊಂಡು ಬರಲು ಮತ್ತು ವಾಪಾಸು ಬಿಡಲು ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಇದಕ್ಕಾಗಿ ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ. ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ನಿಯೋಜನೆ ಮಾಡಲಾಗಿದೆ. ಶೌಚಾಲಯ, ನೆರಳಿನ ವ್ಯವಸ್ಥೆ, ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಈ ವೇಳೆ ನೋಡೆಲ್ ಅಧಿಕಾರಿ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಪ್ರಕಾಶ್, ಜೆ.ದುರುಗೇಶ್, ಮಲ್ಲಾನಾಯ್ಕ, ಮಹೇಶ್ ದೊಡ್ಮನಿ, ಶಾರದಮ್ಮ ಇತರರು ಇದ್ದರು.