ಚಿತ್ರದುರ್ಗ.ಮಾ.೨೫: ಪ್ರತಿಯೊಬ್ಬರು ಕಡ್ಡಾಯವಾಗಿ ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಇದರಿಂದ ವಂಚನೆಗೆ ಒಳಗಾಗದೇ ಜಾಗೃತವಾಗಿರಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಹೆಚ್.ಎನ್. ಮೀನಾ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾ ಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಇವರ ಸಂಯುಕ್ತಾಶ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಯಾವುದೇ ವಸ್ತುವನ್ನು ನಾವು ಖರೀದಿಸಿದರೆ ನಾವು ಗ್ರಾಹಕರಾಗುತ್ತೇವೆ. ಆದರೆ ಕಾನೂನಿನ ದೃಷ್ಠಿಯಿಂದ ಗ್ರಾಹಕರಾಗಬೇಕಾದರೆ ಗ್ರಾಹಕರು ತೆಗೆದುಕೊಳ್ಳುವ ಸರಕು ಮತ್ತು ಸೇವೆಗೆ ರಸೀದಿ ತೆಗೆದುಕೊಂಡಾಗ ಮಾತ್ರ ನಾವು ಕಾನೂನಿನ ಬದ್ಧ ಗ್ರಾಹಕರಾಗುತ್ತೇವೆ. ಅವರಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದರು.ಗ್ರಾಹಕರಾದ ಮೇಲೆ ಅವರಿಗೆ ವಿಶೇಷವಾದ ಹಕ್ಕುಗಳು ಕೂಡ ಬರುತ್ತವೆ. ತಾನು ತೆಗೆದುಕೊಂಡ ಸರಕು ಅಥವಾ ಸೇವೆಗಳಿಂದ ಆದ ದೋಷ ನ್ಯೂನ್ಯತೆ ಮತ್ತು ಅಪಾಯ ಉಂಟಾದರೆ ಅವರ ವಿರುದ್ಧ ರಕ್ಷಣೆ ಪಡೆಯಬಹುದು. ತಾನು ತೆಗೆದುಕೊಂಡ ವಸ್ತುವಿನ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಅದರ ಶಕ್ತಿ ಸಾಮಥ್ರ್ಯ, ಗುಣಮಟ್ಟ, ಶ್ರೇಷ್ಟತೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳವ ಹಕ್ಕು ಇರುತ್ತದೆ. ಮೋಸ, ವಂಚನೆ, ಸೇವಾ ನ್ಯೂನ್ಯತೆ ಶೋಷಣೆಗೆ ಒಳಗಾಗಿದ್ದರೆ ಅದರ ವಿರುದ್ಧ ರಕ್ಷಣೆ ಪಡೆದುಕೊಳ್ಳುವ ಹಕ್ಕು ಇರುತ್ತದೆ ಎಂದರು.