ಪ್ರತಿಯೊಬ್ಬರೂ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಿ

ಕೆ.ಆರ್.ಪೇಟೆ.ಏ.23: ಕೊರೋನಾ ಮಹಾಮಾರಿ ಅಟ್ಟಹಾಸದಿಂದ ಪಾರಾಗಲು ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಳ್ಳುವ ಜೊತೆಗೆ ಮಾಸ್ಕನ್ನು ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೊರೋನಾ ಮಹಾಮಾರಿಯ ಸೋಂಕು ನಿಮ್ಮ ಹತ್ತಿರ ಸುಳಿಯದಂತೆ ಎಚ್ಚರವಾಗಿರಬೇಕು ಎಂದು ಸಮಾಜಸೇವಕ ಪ್ರವೀಣ್ ಚಕ್ರವರ್ತಿ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಗ್ರಾಮದಲ್ಲಿ ಮೈಸೂರಿನ ಸರ್.ಎಂ.ವಿಶ್ವೇಶ್ವರಯ್ಯ ಡೆವಲಪ್‍ಮೆಂಟ್ ಆರ್ಗನೈಜೇಷನ್ ಹಾಗೂ ಯುನೈಟೆಡ್‍ವೇ ಬೆಂಗಳೂರು ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಕೋವ್ಯಾಕ್ಸಿನ್ ಲಸಿಕಾ ಜಾಗೃತಿ ಅಭಿಯಾನ ಹಾಗೂ ಫುಡ್‍ಕಿಟ್ ವಿತರಣೆ ಕಾರ್ಯಕ್ರಮದಲ್ಲಿ 900 ಕ್ಕೂ ಹೆಚ್ಚಿನ ಬಡವರಿಗೆ ಫುಡ್‍ಕಿಟ್, ಸ್ಯಾನಿಟೈಸರ್, ಮಾಸ್ಕ್ ಹಾಗೂ ರೋಗನಿರೋಧಕ ಔಷಧಗಳನ್ನು ವಿತರಿಸಿ ಮಾತನಾಡಿದರು.
ಸರ್.ಎಂ.ವಿಶ್ವೇಶ್ವರಯ್ಯ ಡೆವಲಪ್‍ಮೆಂಟ್ ಆರ್ಗನೈಜೇಷನ್ ಹಾಗೂ ಯುನೈಟೆಡ್‍ವೇ ಸೇವಾ ಸಂಸ್ಥೆಗಳು ಇಂದು ಬಂಡಿಹೊಳೆ ಗ್ರಾಮದಲ್ಲಿ ಕೊರೋನಾ ತಡೆಯ ಬಗ್ಗೆ ಜಾಗೃತಿ ಅಭಿಯಾನವನ್ನು ಮಾಡುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಇಂದು 900 ಕ್ಕೂ ಹೆಚ್ಚಿನ ಜನರು ಫುಡ್‍ಕಿಟ್‍ಗಳನ್ನು ಪಡೆದುಕೊಂಡು 45 ವರ್ಷ ತುಂಬಿರುವ ಕುಟುಂಬದ ಸದಸ್ಯರೆಲ್ಲರೂ ಕೋವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡು ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ತಡೆಯುವ ನಿಟ್ಟಿನಲ್ಲಿ ತಾಲೂಕಿನ ಇತರೆ ಗ್ರಾಮಗಳ ಜನರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಳ್ಳುವ ಪ್ರಮಾಣವು ಬಂಡಿಹೊಳೆ ಗ್ರಾಮದಲ್ಲಿ ಶೇ.80% ದಾಟಿದೆ. ಗ್ರಾಮದಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೂ ಕೊರೋನಾ ಮಹಾಮಾರಿಯಿಂದಾಗುವ ನೋವು ನಲಿವುಗಳು ಮತ್ಯು ಸಂಕಷ್ಠದ ಬಗ್ಗೆ ಅರಿವಿನ ಜಾಗೃತಿಯನ್ನು ಮೂಡಿಸಿಕೊಂಡಿದ್ದಾರೆ. ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕನ್ನು ಧರಿಸುವ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೈಗಳನ್ನು ಆಗಾಗ್ಗೆ ಸ್ಯಾನಿಟೈಸರ್ ಇಲ್ಲವೇ ಸೋಪಿನಿಂದ ತೊಳೆದುಕೊಂಡು ವಯಕ್ತಿಕ ಸ್ವಚ್ಛತೆಗೆ ಒತ್ತು ನೀಡುವುದಾಗಿ ಸಂಕಲ್ಪ ಮಾಡಿದ್ದಾರೆ ಎಂದು ಪ್ರವೀಣ್‍ಚಕ್ರವರ್ತಿ ಅಭಿಮಾನದಿಂದ ಹೇಳಿದರು.
ಬಂಡಿಹೊಳೆ ಗ್ರಾಮದ ಹಿರಿಯರು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.