ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡಿ

ಲಿಂಗಸೂಗೂರು.ಏ.೦೧- ಮೇ ೭ ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಾಲೂಕಿನ ಮತದಾನ ಪ್ರತಿ ಶತವನ್ನು ಹೆಚ್ಚಿಸಬೇಕೆಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್ ಅವರು ಕರೆ ನೀಡಿದರು.ತಾಲೂಕಿನ ಸರ್ಜಾಪೂರ ಗ್ರಾಮದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಪಂಚಾಯತ ರಾಯಚೂರು, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ, ತಾಲೂಕು ಸ್ವಿಪ್ ಸಮಿತಿ ಲಿಂಗಸಗೂರು, ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ವತಿಯಿಂದ ಸರ್ಜಾಪೂರ ಗ್ರಾಮ ಪಂಚಾಯತಿಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ರ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಜಾಗೃತಿ ಅಭಿಯಾನ ವಾಹನಕ್ಕೆ ಹಸಿರು ದ್ವಜದ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮತದಾರರು ಮತದಾನದಿಂದ ದೂರ ಉಳಿಯಬಾರದು, ಮತದಾರರು ಪಟ್ಟಿಯಲ್ಲಿ ನಮದು ನಡಿಕೊಂಡಿರುವ ಎಲ್ಲರೂ ತಪ್ಪದೆ ಮತ ಹಾಕಿದಾಗ ತಾಲೂಕಿನ ಮತದಾನ ಪ್ರತಿಶತ ಹೆಚ್ಚಳ ಮಾಡಲು ಜನರಲ್ಲಿ ಹೆಚ್ಚು ಜಾಗೃತಿ ಮಾಡಿಸಬೇಕೆಂದರು. ಹಾಗೂ ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನ ಉದ್ದೇಶಿಸಿ ಮಾತನಾಡಿ ಏಪ್ರಿಲ್ ಒಂದರಿಂದ ಮೇ ಅಂತ್ಯದವರೆಗೆ ನಿರಂತರವಾಗಿ ಕೂಲಿಕಾರರಿಗೆ ನರೇಗಾ ಯೋಜನೆಯಡಿ, ಪ್ರತಿಯೊಂದು ಕುಟುಂಬಕ್ಕೆ ೧೦೦ ದಿನ ಕೆಲಸ ನೀಡಲಾಗುವುದು ಹಾಗೂ ಬರಗಾಲ ವಿರುವುದರಿಂದ ಎಲ್ಲರೂ ನಮೋನೆ ೬ ಅರ್ಜಿ ಸಲ್ಲಿಸಿ ಕೆಲಸ ಮಾಡಲು ತಿಳಿಸುತ್ತಾ, ದುಡಿಮೆ ಖಾತ್ರಿಯನ್ನು ಎಲ್ಲರು ಉಪಯೋಗ ಮಾಡಿಕೊಳ್ಳಬೇಕು ಎಂದರು.(ಎನ್ ಆರ್ ಎಲ್ ಎಂ) ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಈರಪ್ಪ ಅವರು ಮಾತನಾಡಿ ಉತ್ತಮ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮತದಾನದ ಅವಶ್ಯಕತೆ ಇದ್ದು, ಅದಕ್ಕಾಗಿ ತಾಲೂಕಿನಾದ್ಯಂತ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, ಗ್ರಾಮೀಣ ಮಹಿಳೆಯರು ತಮ್ಮ ಸುತ್ತಲಿನ ಜನರಿಗೆ ಮತದಾನ ಅರಿವು ಮೂಡಿಸುವುದರಿಂದ ಕಡ್ಡಾಯ ಮತದಾನ ಮಾಡಲು ಅನುಕೂಲವಾಗುತ್ತದೆ ಸಂಜೀವಿನಿ ಒಕ್ಕೂಟದ ಸದಸ್ಯರು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತೀಶತ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದರು. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ವಧುವರರಾದ ಸರ್ಜಾಪೂರ ಗ್ರಾಮದ ನಿಂಗಪ್ಪ- ಶಾಂತಮ್ಮ ಯತಗಲ್, ನವ ದಂಪತಿಗಳು ಮತದಾನ ಜಾಗೃತಿ ಜಾಥಾ ವಾಹನದ ಮುಂದೆ ಬಂದು ಕಾರ್ಯನಿರ್ವಾಹಕ ಅಧಿಕಾರಿಗಳು ಅಮರೇಶ ಯಾದವ್ ಅವರ ಸಮ್ಮುಖದಲ್ಲಿ ಮತದಾನ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ, ಎಲ್ಲರೊಂದಿಗೆ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಮತದಾನ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ನಂತರ ಮೇಣದ ಬತ್ತಿ ಹಚ್ಚಿಕೊಂಡು ಬೀದಿಯಲ್ಲಿ ಮತದಾನ ಘೋಷಣೆ ಕೂಗುತ್ತಾ ಜಾಥಾ ಮಾಡಲಾಯಿತು, ಮಹಿಳೆಯರಿಂದ ರಂಗೋಲಿ ಬಿಡಿಸುವ ಮೂಲಕ ಹಾಗೂ ಅಂಗೈಯಲ್ಲಿ ಮೆಹಿಂದಿ ಹಾಕೊಂಡು ಮತದಾನ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ನರೇಗಾ ಐಇಸಿ ಸಂಯೋಜಕ ಬಾಲಪ್ಪ, (ಎನ್ ಆರ್ ಎಲ್ ಎಂ) ತಾಲೂಕು ವ್ಯವಸ್ಥಾಪಕರು(ಕೃಷಿ) ಮಲ್ಲಪ್ಪ ಗಾಳಪೂಜಿ, ಕೌಶಲ್ಯ ವಲಯ ಮೇಲ್ವಿಚಾರಕರು ಬಸವರಾಜ ಕಟ್ಟಿಮನಿ, ವಲಯ ಮೇಲ್ವಿಚಾರಕರು ಹೊನ್ನಮ್ಮ, ಅಂಗನವಾಡಿ ಶಿಕ್ಷಕಿಯರು, ಸಂಜೀವಿನಿ ಒಕ್ಕೂಟದವರು, ಎಂಬಿಕೆ- ಸಹದೇವಮ್ಮ, ಎಲ್ ಸಿಆರ್ ಪಿ ಬಸಲಿಂಗಮ್ಮ, ರೇಷ್ಮ, ಕೃಷಿಸಖಿ ಹುಲಿಗೆಮ್ಮ, ಪಶುಸಖಿ ಜಯಶ್ರೀ, ಆಶಾ ಕಾರ್ಯಕರ್ತೆಯರು, ಕಸವಿಲೇವಾರಿ ಘಟಕದ ಸಿಬ್ಬಂದಿಗಳು ಹಾಗೂ ಪಂಚಾಯತ್ ಸಿಬ್ಬಂದಿಗಳು ಮಹಿಳೆಯರು ಹಾಜರಿದ್ದರು.