ಪ್ರತಿಯೊಬ್ಬರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ

ಕಲಬುರಗಿ.ನ.6: ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಆದುನಿಕ ಕಾಲದ ಒತ್ತಡದ ಬದುಕಿನಲ್ಲಿ ಆರೋಗ್ಯ ಬಗ್ಗೆ ನಿರ್ಲಕ್ಷ ವಹಿಸುತ್ತಿರುವುದರಿಂದ ಅನೇಕ ಕಾಯಿಲೆಗಳು ಆವರಿಸುತ್ತಿವೆ. ಸೂಕ್ತ ಕಾಲಕ್ಕೆ ಆಹಾರ, ವಿಶ್ರಾಂತಿ, ವ್ಯಾಯಾಮ ಮಾಡುವ ಆರೋಗ್ಯಕರ ಜೀವನಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಆಗಾಗ್ಗೆ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡು ಏನಾದರೂ ಸಮಸ್ಯೆಯಿದ್ದರೆ ಆರಂಭದಲ್ಲಿ ಚಿಕಿತ್ಸೆ ಪಡೆದುಕೊಂಡು ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಶಿವಶಂಕರ ವಾಲಿ ಸಲಹೆ ನೀಡಿದರು.
ಮಾಣಿಕೇಶ್ವರಿ ಕಾಲನಿಯ ನಗರ ಆರೋಗ್ಯ ಕೇಂದ್ರದ ವತಿಯಿಂದ ನಗರದ ಸಂತೋಷ ಕಾಲನಿಯ ಕೆಎಚ್ ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿ.ಪಿ. ಸುಗರ್ ಸೇರಿದಂತೆ ಒಂದು ದಿನದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇಡೀ ಜೀವನದುದ್ದಕ್ಕೂ ಬಾಧಿಸುವದು ಸಕ್ಕರೆ ಕಾಯಿಲೆಯಾಗಿದೆ. ಆಧುನಿಕ ಸೌಲಭ್ಯಗಳಿಂದಾಗಿ ದೈಹಿಕ ಶ್ರಮವು ಇಲ್ಲದಂತಾಗಿ, ನಿಯಮಿತ ವ್ಯಾಯಾಮದ ಕೊರೆತೆಯಿಂದ ಈ ರೋಗವು ಹೆಚ್ಚಾಗುತ್ತಿದೆ. ಈಗಾಗಲೇ ಭಾರತದಲ್ಲಿ ಸುಮಾರು ಶೇ.20 ರಷ್ಟು ಈ ಕಾಯಿಲೆಗೆ ಒಳಗಾಗಿರುವುದೆಂದು ಅಂದಾಜಿಸಲಾಗಿದೆ. ಅಸಹಜವಾಗಿ ಅಧಿಕ ಬಾಯಾರಿಕೆ, ಅತಿಯಾದ ಮೂತ್ರ ವಿಸರ್ಜನೆ, ಸುಸ್ತಾಗುವುದು, ಮೂರ್ಛೆ ಹೋಗುವುದು, ಕಣ್ಣಿನ ದೃಷ್ಠಿ ತೊಂದರೆಯುಂಟಾಗುವುದು, ಗಾಯವಾದಾಗ ಬೇಗನೆ ವಾಸಿಯಾಗದೇ ಇರುವುದು, ಸ್ಪರ್ಷ ಜ್ಞಾನ ಕಡಿಮೆಯಾಗುವುದು ಇವು ಸಕ್ಕರೆ ಕಾಯಿಲೆಯ ಪ್ರಮುಖವಾದ ಲಕ್ಷಣಗಳಾಗಿವೆಯೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆಎಚ್‍ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ, ಬಿ.ಪಿ, ಸುಗರ್ ಇತ್ತಿಚಿನ ದಿವಸಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದೆ. ನಮ್ಮ ಬಡಾವಣೆಯ ಎಲ್ಲರಿಗೂ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿ, ಏನಾದರೂ ಸಮಸ್ಯೆ ಕಂಡುಬಂದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಸರ್ಕಾರ, ಆರೋಗ್ಯ ಇಲಾಖೆ ಎಲ್ಲರಿಗೂ ಆರೋಗ್ಯ ಸೌಕರ್ಯ ಒದಗಿಸಬೇಕೆಂಬ ಉದ್ದೇಶಗಳಿಂದ ಇಂತಹ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಶಿಬಿರದಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗಂಗಾಬಾಯಿ ಕುಂಬಾರ, ಸುಧಾರಾಣಿ ಪಂಚಾಳ, ಮೀರಾ ಹಡಪದ, ಜಯಲಕ್ಷ್ಮೀ ಮುಕರಂಬಿ, ಲಕ್ಷ್ಮೀ ಮುಗಳಿ, ಮಹಾವೀರ, ಪ್ರಮುಖರಾದ ಎಚ್.ಬಿ.ಪಾಟೀಲ, ಸಂಗಮೇಶ್ವರ ಸರಡಗಿ, ಬಾಲಕೃಷ್ಣ ಕುಲಕರ್ಣ, ಬಸವರಾಜ ಹೆಳವರ ಯಾಳಗಿ, ಚಂದ್ರಕಾಂತ ಮಲ್ಕಾಪುರೆ ಸೇರಿದಂತೆ ಮತ್ತಿತರರಿದ್ದರು.