ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯಿರಿ

ಕೋಲಾರ,ಮೇ.೨:ಕೋವಿಡ್-೧೯ ಕರೋನಾ ಮಹಾಮಾರಿ ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ ಸೋಂಕು ತಡೆಗೆ ಸಹಕರಿಸಿ ಎಂದು ಜನ್ನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಸತೀಶ್ ಮೂರ್ತಿ ಕರೆ ನೀಡಿದರು.
ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆಗೆ ಚಾಲನೆ ನೀಡಿದ ಅವರು, ಕೋವಿಡ್ ಮಾರಿ ಮೊದಲು ನಗರಗಳಿಗೆ ಸೀಮಿತವಾಗಿತ್ತು, ಇತ್ತೀಚಿನ ದಿನಗಳಲ್ಲೂ ಗ್ರಾಮಗಳಲ್ಲೂ ವ್ಯಾಪಿಸುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು.
ಜನತೆ ಗಂಭೀರತೆ ಅರಿತು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಗ್ರಾಮದಲ್ಲಿ ಮತ್ತು ನಿಮ್ಮ ಮನೆಗಳ ಅಕ್ಕಪಕ್ಕದಲ್ಲಿ ಸ್ವಚ್ಚತೆ ಕಾಪಾಡಿ ಎಂದು ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ ಜ್ವರ,ಶೀತ,ನೆಗಡಿ, ಕೆಮ್ಮು ಮತ್ತಿತರ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ತಕ್ಷಣೆ ನಿರ್ಲಕ್ಷ್ಯ ಮಾಡದಿರಿ, ಕೂಡಲೇ ಕೋವಿಡ್ ಪರೀಕ್ಷೆಗೆ ಒಳಪಟ್ಟು, ಸೋಂಕು ಪತ್ತೆಯಾದರೆ ಭಯ ಪಡದೇ ಮನೆಯಲ್ಲೇ ಇದ್ದು ಕೋವಿಡ್‌ಗೆ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಕೆಲವು ಹಳ್ಳಿಗರಲ್ಲಿ ಕೋವಿಡ್ ಬಂದಿದೆ ಎಂದು ಗೊತ್ತಾದರೆ ಅವಮಾನ ಎಂಬ ಮೂಢನಂಬಿಕೆ ಇದೆ, ಇದು ಸರಿಯಲ್ಲ, ಅದೂ ಒಂದು ಕಾಯಿಲೆ ಅಷ್ಟೇ, ಅಗತ್ಯ ಚಿಕಿತ್ಸೆ ಪಡೆದರೆ ಯಾವುದೇ ಸಮಸ್ಯೆಯಾಗದು ಎಂದು ತಿಳಿಸಿದರು.
ಗ್ರಾಮದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಮುಂದಾಗಿ, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದ ಅವರು, ಹಿಂದೆ ಸಿಡುಬು, ದಡಾರ ಮತ್ತಿತರ ಮಾರಕ ರೋಗಗಳಿಗೆ ಲಸಿಕೆ ಪಡೆದಂತೆಯೂ ಇಂದು ಕೋವಿಡ್‌ಗೆ ಲಸಿಕೆ ಪಡೆಯಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜನ್ನಘಟ್ಟ ಗ್ರಾಮ ಪಂಚಾಯಿತಿವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಸ್ಯಾನಿಟೈಸರ್ ಸಿಂಪಡಿಸಲುಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಂಪಿಸಿಎಸ್ ಅಧ್ಯಕ್ಷ ಕೆ.ಟಿ.ಗೋಪಾಲಪ್ಪ, ಗ್ರಾ.ಪಂ ಸದಸ್ಯರಾದ ಲಕ್ಷ್ಮಣ್, ಚಂದ್ರಾರೆಡ್ಡಿ, ಜಯರಾಮಪ್ಪ, ನಿವೃತ್ತ ಪೋಸ್ಟ್ ಮಾಸ್ಟರ್ ಎಸ್.ಶಾಂಭಮೂರ್ತಿ ಮತ್ತಿತರರಿದ್ದರು.