ಪ್ರತಿಯೊಬ್ಬರು ಕಾನೂನು ಅರಿತು, ಪಾಲಿಸುವದರಿಂದ ಶಾಂತಿಯುತ ಸಮಾಜ ನಿರ್ಮಾಣ

ಕಲಬುರಗಿ:ನ.27: ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳು, ಕರ್ತವ್ಯಗಳು, ದೈನಂದಿನ ಸುಗಮ ಬದುಕಿಗೆ ಬೇಕಾದ ಕನಿಷ್ಠ ಕಾನೂನಿನ ಜ್ಞಾನವನ್ನು ಹೊಂದಿರಬೇಕು. ಇದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗಿ, ಶಾಂತಿಯುತ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಪಿಎಸ್‍ಐ ಸಂಗಮೇಶ ಅಂಗಡಿ ಅಭಿಮತ ವ್ಯಕ್ತಪಡಿಸಿದರು.
ಜೇವರ್ಗಿ ಪಟ್ಟಣದ ಬಸವೇಶ್ವÀರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಶನಿವಾರ ಏರ್ಪಡಿಸಲಾಗಿದ್ದ ‘ಕಾನೂನು ಅರಿವು ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾನೂನು ರಚನೆಯಾಗಿರುವುದು ಒಳ್ಳೆಯ ವ್ಯಕ್ತಿ ಹಾಗೂ ದೇಶದ ರಕ್ಷಣೆಗಾಗಿ. ಇದರ ಉಲ್ಲಂಘನೆ ಸಲ್ಲದು. ಬಾಲ್ಯವಿವಾಹ ಅಪರಾದವಾಗಿದ್ದು, ಇದರಿಂದ ಮಗು ಶಿಕ್ಷಣ ವಂಚಿತವಾಗಿ ಜೀವನದಲ್ಲಿ ತೊಂದರೆಗೆ ಒಳಗಾಗುತ್ತದೆ. ಬಾಲ್ಯ ದೌರ್ಜನ್ಯ ಸಲ್ಲದು. ವರದಕ್ಷಿಣೆ ಪಡೆಯಬಾರದು. ಬಾಲ ಕಾರ್ಮಿಕ ಪದ್ದತಿ ಆಚರಿಸಕೂಡದು. ವಿದ್ಯಾರ್ಥಿ ದೆಸೆಯಿಂದಲೇ ಪ್ರೀತಿ-ಪ್ರೇಮ ಎಂಬ ಭ್ರಮಾಲೋಕದಲ್ಲಿ ಮುಳುಗಿ ನಿಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ. ಸಂಚಾರಿ ನಿಯಮಗಳನ್ನು ಪಾಲಿಸಬೇಕು. ನಿರಂತರವಾಗಿ ಅಧ್ಯಯನ ಮಾಡುವ ಮೂಲಕ ಉನ್ನತವಾದ ಸಾಧನೆಯನ್ನು ಮಾಡಬೇಕು ಎಂದು ಅನೇಕ ಕಾಯ್ದೆ-ಕಾನೂನುಗಳನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಮೊಹ್ಮದ್ ಅಲ್ಲಾಉದ್ದೀನ್ ಸಾಗರ, ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ನಿರ್ಲಕ್ಷ ವಹಿಸಿ ಬೇಜವಬ್ದಾರಿ ತೋರಿಸಬಾರದು. ವಿದ್ಯಾರ್ಥಿ ದೆಸೆಯಿಂದಲೇ ಸಾಮಾನ್ಯ ಕಾನೂನಿನ ಬಗ್ಗೆ ಜ್ಞಾನವನ್ನು ನಿಮಗೆ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ನಿಮ್ಮ ಮುಂದಿನ ಭವ್ಯ ಭವಿಷ್ಯದ ನಿರ್ಮಾಣಕ್ಕೆ ತುಂಬಾ ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಾರ್ವಜನಕಿ ಆಸ್ತಿ-ಪಾಸ್ತಿಯನ್ನು ರಕ್ಷಣೆ ಮಾಡುವ ಮೂಲಕ ಆದರ್ಶ ವಿದ್ಯಾರ್ಥಿಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಉಪನ್ಯಾಸಕ ರವೀಂದ್ರಕುಮಾರ ಬಟಗೇರಿ ಸ್ವಾಗತಿಸಿದರು. ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್, ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಮಂಜುನಾಥ ಎ.ಎಂ., ಪ್ರಕಾಶ ಪಾಟೀಲ, ಪ್ರ.ದ.ಸ ನೇಸರ ಬೀಳಗಿ, ಅತಿಥಿ ಉಪನ್ಯಾಸಕರಾದ ಬಸವರಾಜ ಎಸ್.ಪುರಾಣೆ, ವಿಜಯಲಕ್ಷ್ಮೀ, ವಿದ್ಯಾರ್ಥಿ ಪ್ರತಿನಿಧಿಗಳಾದ ಕರೀಮ್, ಬಸವರಾಜ, ಹುಲೆಪ್ಪ, ಐಶ್ವರ್ಯ, ಪಾರ್ವತಿ, ಶಿವಲೀಲಾ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.