ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ: ರಜನಿಕಾಂತ ಚೌಹಾಣ್

ನಗರಸಭೆಯಿಂದ ಮತದಾನದ ಕುರಿತು ಜಾಗೃತಿ ಜಾಥ
ರಾಯಚೂರು,ಏ.೨೦- ಮತದಾನ ಎಂಬುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ, ಹಾಗೂ ಮೂಲಭೂತ ಹಕ್ಕಾಗಿದ್ದು, ಯಾವುದೇ ಆಸೆ ಆಮೀಶಗಳಿಗೆ ಒಳಗಾಗದೇ ಪ್ರತಿಯೊಬ್ಬರು ಮತದಾನ ಮಾಡಲು ಮುಂದಾಗಬೇಕೆಂದು ಸಹಾಯಕ ಆಯುಕ್ತ ರಜನಿಕಾಂತ ಚೌಹಾಣ್ ಅವರು ಹೇಳಿದರು.
ಅವರು ಏ.೧೯ರ(ಬುಧವಾರ) ನಗರಸಭೆ ಕಾರ್ಯಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಜಿಲ್ಲಾ ಸ್ವೀಪ ಸಮಿತಿ ಹಾಗೂ ನಗರ ಸಭೆ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಮದ ಅಂಗವಾಗಿ ಮೇಣದಬತ್ತಿಯೊಂದಿಗೆ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
೧೮ ವರ್ಷದ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ಮತದಾನ ಮಾಡುವುದು ಕಡ್ಡಾಯವಾಗಿದ್ದು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ ಮತದಾನ ಮಾಡಲು ಮುಂದಾಗಬೇಕು ಮತದಾನ ಪ್ರತಿಯೊಬ್ಬರ ಹಕ್ಕು ಅದನ್ನು ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಮಾತನಾಡಿ, ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನವರಿಗೆ ಮತದಾನದ ಮಹತ್ವವನ್ನು ತಿಳಿಸಬೇಕು ಮತ್ತು ಪ್ರತಿಯೊಬ್ಬರು ಮತದಾನ ಮಾಡುವಂತೆ ಅವರಲ್ಲಿ ಮತದಾನ ಕುರಿತು ಅರಿವು ಮೂಡಿಸಬೇಕು ಎಂದರು.
ಮತದಾರರ ಸಾಕ್ಷಾರತ ಕ್ಲಬ್‌ನ ಸಂಪನ್ಮೂಲ ವ್ಯಕ್ತಿ ದಂಡಪ್ಪ ಬಿರಾದಾರ ಮಾತನಾಡಿ, ಮತದಾನದ ಹಕ್ಕನ್ನು ಚಲಾಯಿಸಲು ಮತದಾನದ ದಿನದಂದು ಮತದಾನ ಮಾಡಬೇಕು. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ನಂತರ ಮೇಣಬತ್ತಿ ಹಿಡಿದು ನಗರಸಭೆ ಕಾರ್ಯಾಲಯದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ವರೆಗೆ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಯಿತು. ಡಾ.ಬಿ.ಆರ್ ಅಂಬೇಡ್ಕರ ವೃತ್ತದಲ್ಲಿ ಮಾನವ ಸರಪಳಿ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ಚನ್ನಮಲ್ಲಪ್ಪ ಗಂಟಿ, ಕೃಷ್ಣಾ ಕಟ್ಟಿಮನಿ, ಶಕೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.