ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು


ಬ್ಯಾಡಗಿ,ಮಾ.25: ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಕರೆ ನೀಡಿದರು.
ತಾಲೂಕಿನ ಬುಡಪನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಛತ್ರ ಗ್ರಾಮದ ಕೊಟ್ರಯ್ಯ ದುಂಡಯ್ಯ ಕಚವಿಮಠ ಇವರ ಹೊಲದಿಂದ ಕೊಟ್ರಯ್ಯ ಹೊಲದವರಿಗೆ ಹಳ್ಳ ಹೂಳೆತ್ತುವ ಕಾಮಗಾರಿಯ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ತಾಲೂಕಿನಲ್ಲಿ ಹಿರೇಅಣಜಿ, ಸೂಡಂಬಿ, ಕುಮ್ಮೂರು, ಚಿಕ್ಕಬಾಸೂರ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಕೆಲಸದ ಸಂದರ್ಭದಲ್ಲಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗಿದ್ದು, ಅದರಂತೆ ಇನ್ನುಳಿದ ಗ್ರಾಮ ಪಂಚಾಯತಿಗಳಲ್ಲಿಯೂ ಸಹ ಮತದಾನದ ಕುರಿತು ಜಾಗೃತಿ ಮೂಡಿಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯ ಟಿಐಸಿ ಶಾನವಾಜ ಚಿಣಗಿ ಕೂಲಿ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಪ್ರಕಾಶ ಹುಣಸಿಕಟ್ಟಿ, ಬಿಎಫ್’ಟಿ ಕರಿಗೌಡ ಪುಟ್ಟನಗೌಡ್ರ, ಗ್ರಾಮ ಕಾಯಕ ಮಿತ್ರರಾದ ಮಹದೇವಕ್ಕ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.