ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಪ್ರಕೃತಿ ಋಣ ತೀರಿಸಿಃ ಹಾಸಿಂಪೀರ ವಾಲೀಕಾರ

ವಿಜಯಪುರ, ಜು.26-ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಪ್ರಕೃತಿ ಋಣ ತೀರಿಸದಿದ್ದರೆ ಮುಂದಿನ ಪೀಳಿಗೆ ಬದುಕು ಕಷ್ಟಸಾಧ್ಯ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.
ನಗರದ ಕೀರ್ತಿ ನಗರದಲ್ಲಿರುವ ಶರಣ ಜ್ಯೋತಿ ವಿದ್ಯಾ ಸಂಸ್ಥೆ ಗ್ರಾಮೀಣ ಬಾಲಕೀಯರ ವಸತಿ ನಿಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಮನೆಗೊಂದು ಮಗು ಇಲ್ಲದಿದ್ದರೆ ಮನೆತನ ಮುಂದುವರೆಯುವುದು ಕಷ್ಟ ಎಂಬುದಿತ್ತು. ಆದರೆ, ಈಗ ಹಾಗಿಲ್ಲ. ಮನೆಗೆ ಒಂದೊಂದು ಸಸಿ ನೆಡದಿದ್ದರೆ ಮುಂದಿನ ಪೀಳಿಗೆಯ ಬದುಕೇ ಕಷ್ಟ ಎಂದರು.
ಚಿಂತಕ ಮೋಹನ ಮೇಟಿ ಮಾತನಾಡಿ, ಮಹಾನಗರ ಪಾಲಿಕೆ ಸೇರಿದಂತೆ ನಗರ ಪ್ರದೇಶಗಳಲ್ಲಿ ಇಂದು ಮಾಲಿನ್ಯ ಹೆಚ್ಚಾಗಿ ಜನರಿಗೆ ಸರಿಯಾಗಿ ಉಸಿರಾಡಲು ಅವಕಾಶ ಆಗುತ್ತಿಲ್ಲ. ಇದರಿಂದ ಶ್ವಾಸಕೋಶದ ತೊಂದರೆ, ಸಾಕಷ್ಟು ರೋಗಗಳಿಗೆ ಒಳಗಾಗುತ್ತಿದ್ದೇವೆ. ಮರ ಬೆಳೆಸದಿರುವುದು, ಬೆಳೆಸಿರುವ ಮರಗಳನ್ನು ಕಡಿಯುತ್ತಿರುವುದೇ ಇದಕ್ಕೆಲ್ಲಾ ಮೂಲ ಕಾರಣ. ಮರಗಿಡಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ ಎಂದರು.
ಸಂಸ್ಥೆಯು ಅಧ್ಯಕ್ಷ ಮಲ್ಲಿಕಾರ್ಜುನ ದೇವಣಗಾವ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೆ?ಲಿಯೊಂದಿಗೆ ಸ್ವಚ್ಚ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದ್ದು,ಅದಕ್ಕಾಗಿ ನಾವು ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಕೆ.ಸುನಂದಾ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಅಧ್ಯಾಪಕಿ ವಿಜಯಲಕ್ಷ್ಮಿ ಕೌಲಗಿ, ಸುಖದೇವಿ ಅಲಬಾಳ, ಗೋವರ್ಧನ ಚಲವಾದಿ, ಅಮೃತ ತಿಪೆರಿ, ಹಂಪಯ್ಯ ಹಿರೇಮಠ ಶಿವಾನಂದ ಹಿರೇಮಠ. ವಿಜಯಲಕ್ಷ್ಮಿ ದೇವಣಗಾವ ರೋಹಿಣಿ, ಅನೀಲ ಪವಾರ, ಪ್ರೇಮಾ ನಂದರಗಿ ಸುರೇಶ ನಾಯಿಕೊಡಿ, ರಾಜಣ್ಣ ಉಕ್ಕಲಿ ಮುಂತಾದವರು ಇದ್ದರು. ಮಾನ್ಯ ಚವ್ಹಾಣ ಸ್ವಾಗತಿಸಿದರು.