ಪ್ರತಿಯೊಬ್ಬರು ಆರೋಗ್ಯದ ಮಾಹಿತಿಯನ್ನೊದಗಿಸುವ‘ಡಿಜಿಟಲ್ ಹೆಲ್ತ್ ಕಾರ್ಡ್’ನ್ನು ಪಡೆಯಲು ಸೂಚನೆ

ಕಲಬುರಗಿ.ಆ.4:ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಡಿಜಿಟಲೀಕರಣ ಗೊಳಿಸಲು ‘ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್’ ಎಂಬ ಯೋಜನೆಗೆ ಮಾನ್ಯ ಪ್ರಧಾನಮಂತ್ರಿಗಳು ಇತ್ತೀಚಿಗೆ ಚಾಲನೆ ನೀಡಿದ್ದು, ಪ್ರತಿಯೊಬ್ಬರು ಈ ‘ಡಿಜಿಟಲ್ ಹೆಲ್ತ್ ಕಾರ್ಡ್’ನ್ನು ಪಡೆದುಕೊಂಡಲ್ಲಿ ವೈದ್ಯಕೀಯ ಸೇವೆ ಇನ್ನಷ್ಟು ಸುಲಭವಾಗಿ ಸಿಗಲಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯ ವಿವರ: ದೇಶದ ಪ್ರತಿ ಪ್ರಜೆಗೂ ಗುಣಮಟ್ಟದ, ಸುಲಲಿತ, ಸಮಗ್ರ ಮತ್ತು ಸುರಕ್ಷಿತ ಆರೋಗ್ಯ ಸೇವೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆಧಾರ್ ಕಾರ್ಡ್ ಅಥವಾ ಮೊಬೈಲ್ ನಂಬರ್‍ನ್ನು ಬಳಸಿಕೊಂಡು ವ್ಯಕ್ತಿಯ ‘ಡಿಜಿಟಲ್ ಹೆಲ್ತ್ ಕಾರ್ಡ್’ ಅನ್ನು ರಚಿಸಲಾಗುತ್ತದೆ. ಈ ಕಾರ್ಡ್ 14 ಸಂಖ್ಯೆಯನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬರ ಆರೋಗ್ಯದ ಕುರಿತು ಮಾಹಿತಿಗಳು ಇದರಲ್ಲಿ ದೊರೆಯಲಿದೆ. ಅಂದರೆ ಕಾರ್ಡ್ ವಿತರಿಸಿದ ಬಳಿಕ ಆ ವ್ಯಕ್ತಿ ದೇಶದ ಯಾವುದೇ ವೈದ್ಯರನ್ನು ಭೇಟಿ ಮಾಡಿದ ವಿವರ, ವೈದ್ಯರು ನೀಡಿದ ಚಿಕಿತ್ಸೆ, ಮಿಕ್ಕ ವೈದ್ಯಕೀಯ ವರದಿಗಳು, ವ್ಯಕ್ತಿ ಎದುರಿಸುತ್ತಿರುವ ಕಾಯಿಲೆಗಳು ಸೇರಿದಂತೆ ಆರೋಗ್ಯದ ಕುರಿತು ಸಂಪೂರ್ಣ ಮಾಹಿತಿ ಈ ಕಾರ್ಡ್ ಮೂಲಕ ಲಭ್ಯವಾಗಲಿದೆ.

ವೈದ್ಯರಿಗೂ ಸಹಾಯಕ: ವೈದ್ಯರನ್ನು ಭೇಟಿಯಾಗಿ ‘ಡಿಜಿಟಲ್ ಹೆಲ್ತ್ ಕಾರ್ಡ್’ನ್ನು ತೋರಿಸಿದ್ದಲ್ಲಿ ರೋಗಿಯ ಆರೋಗ್ಯದ ಎಲ್ಲಾ ಪೂರ್ವಾಪರ ಮಾಹಿತಿ ದೊರೆಯುತ್ತದೆ. ವೈದ್ಯರು ನಿಯಮಿತ ಚಿಕಿತ್ಸೆಗೆ ಒಳಪಡುವ ವ್ಯಕ್ತಿಯ ಆರೋಗ್ಯದ ಕುರಿತು ದಾಖಲೆಗಳನ್ನು ಅಗತ್ಯ ಸಂದರ್ಭದಲ್ಲಿ ಬಳಸಲು ಈ ಡಿಜಿಟಲ್ ಹೆಲ್ತ್ ಕಾರ್ಡ್’ ಸಹÀಕಾರಿಯಾಗಿದೆ. ಯಾವುದೇ ವ್ಯಕ್ತಿಯು ಆರೋಗ್ಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸದಿದ್ದರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

    ಎಲ್ಲಾ ಆಸ್ಪತ್ರೆಗಳಿಗೆ ಆನ್ವಯ: ‘ಡಿಜಿಟಲ್ ಹೆಲ್ತ್ ಕಾರ್ಡ್’ ಎಲ್ಲಾ ಆಸ್ಪತ್ರೆಗಳು, ಡಯಾಗ್ನಸ್ಟಿಕ್ ಲ್ಯಾಬೊರೇಟರಿಗಳು ಮತ್ತು ಫಾರ್ಮಸಿಗಳಿಗೆ ಅನ್ವಯವಾಗುತ್ತದೆ. ಮುಂದಿನ ದಿನಗಳಲ್ಲಿ ಇದು ಇ-ಫಾರ್ಮಸಿ, ಟೆಲಿಮೆಡಿಸಿನ್ ಸೇವೆಗಳನ್ನೂ ಪ್ರಾರಂಭಿಸಲಿದೆ.
  ಪ್ರಯೋಜನಗಳು: ಅನಾರೋಗ್ಯಪೀಡಿತ ವ್ಯಕ್ತಿಯು ಪ್ರತಿಸಲ ಆಸ್ಪತ್ರೆಗೆ ಹೋಗುವಾಗಲೂ ತನ್ನ ವೈದ್ಯಕೀಯ ವರದಿಗಳನ್ನು ತೆಗೆದುಕೊಂಡು ಹೋಗಬೇಕಾಗಿಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ನಿಯಮಿತವಾಗಿ ಈ ಬಗ್ಗೆ ಪರಿಶೀಲನೆ ನಡೆಸುವುದರಿಂದ, ಯಾವ ವ್ಯಕ್ತಿಗೆ ಯಾವ ಸಂದರ್ಭದಲ್ಲಿ ಆರೋಗ್ಯ ತಪಾಸಣೆಯ ಅಗತ್ಯವಿದೆ ಎನ್ನುವುದನ್ನು ತಿಳಿಸುತ್ತದೆ.  (ಉದಾ: ರಕ್ತದೊತ್ತಡ, ಮಧುಮೇಹದಂತಹ ನಿಯಮಿತ ತಪಾಸಣೆ).  ಈ ಕಾರ್ಡ್ ಮೂಲಕ ರೋಗಿಗಳು ‘ಆಯುಷ್ಮಾನ್ ಭಾರತ್’ ಯೋಜನೆಯಂತಹ ಸರ್ಕಾರಿ ಯೋಜನೆಯ ಸೇವೆಯನ್ನು ಕೂಡಾ ಪಡೆಯಬಹುದಾಗಿದೆ.  ಹೆಲ್ತ್ ಕಾರ್ಡ್ ಬಳಸಿಕೊಂಡು ಪ್ರತಿ ಪೌರನೂ ಆರೋಗ್ಯ ಖಾತೆಗೆ ಲಾಗಿನ್ ಆಗಿ ಅವರ ವೈಯಕ್ತಿಕ ಆರೋಗ್ಯ  ದಾಖಲೆಗಳನ್ನು ಮೊಬೈಲ್ ಆ್ಯಪ್ ಮೂಲಕವೇ ಪರಿಶೀಲಿಸಬಹುದಾಗಿದೆ. 

ಪ್ರತಿಯೊಬ್ಬರು ಡಿಜಿಟಲ್ ಹೆಲ್ತ್ ಕಾರ್ಡ್’ ಪಡೆಯಲು https://abha.abdm.gov.in ವೆಬ್‍ಸೈಟ್‍ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.