ಪ್ರತಿಯೊಬ್ಬರಿಗೆ ಕಾನೂನು ಅರಿವು ಅಗತ್ಯ – ನ್ಯಾ.ಮಲ್ಲಿಕಾರ್ಜುನ ಗೌಡ

ರಾಯಚೂರು,ನ.೯-ಕಾನೂನು ಅರಿವು ಪ್ರತಿಯೊಬ್ಬರಿಗೆ ಅಗತ್ಯ ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯದೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಮಲ್ಲಿಕಾರ್ಜುನಗೌಡ ಹೇಳಿದರು.
ಅವರಿಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ,ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರಾಷ್ಟ್ರೀಯ ಮಹಿಳಾ ಆಯೋಗ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತ ಮತ್ತು ಪ್ರಸಾರ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಜೀವನಾಂಶ ಮತ್ತು ಮಹಿಳೆಯರ ಹಕ್ಕುಗಳ ಕುರಿತು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಎರಡನೇ ತಾಯಿಯಂತಿದ್ದು, ಮಕ್ಕಳನ್ನು ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.ಹಲವು ದಶಕಗಳಿಂದ ಗ್ರಾಮೀಣ ಭಾಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಮಹಿಳೆಯರ ಹಕ್ಕುಗಳು, ಅವರ ಕೌಟುಂಭಿಕ ಸಮಸ್ಯೆಗಳ ಬಗ್ಗೆ ಕಾನೂನಾತ್ಮಕವಾಗಿ ಬಗೆಹರಿಸುವ ಬಗ್ಗೆ ಅರಿವು ಮೂಡಿಸಿ ಗ್ರಾಮೀಣ ಭಾಗದ ಜನರನ್ನು ಅಂಗನವಾಡಿ ಕಾರ್ಯಕರ್ತೆಯರು ಜಾಗೃತಗೊಳಿಸಬೇಕು ಎಂದರು.
ಕುಟುಂಬದಲ್ಲಿ ಹೊಂದಾಣಿಕೆ ಬಹಳ ಮುಖ್ಯವಾಗಿದ್ದು, ಹೊಂದಾಣಿಕೆ ಕೊರತೆಯಿಂದಾಗಿ ಕೌಟುಂಭಿಕ ಕಲಹಗಳು ಏರ್ಪಡುತ್ತವೆ. ಮಹಿಳೆಯರು ತಮ್ಮ ಸಮಸ್ಯೆಗಳನ್ನು ಕಾನೂನಾತ್ಮವಾಗಿ ಬಗೆಹರಿಸಿಕೊಳ್ಳಲು ಕಾನೂನು ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಮೂಲಕ ಉಚಿತವಾಗಿ ತಮ್ಮ ಸಮಸ್ಯಗಳನ್ನು ಬಗೆಹರಿಸಿಕೊಳ್ಳಬಹುದು. ಕಾನೂನು ಪ್ರಾಧಿಕಾರಗಳು ಮದ್ಯಸ್ಥಿಕೆ ಕೇಂದ್ರಗಳಾಗಿದ್ದು, ಮೊದಲು ಪ್ರಕರಣಗಳನ್ನು ಲೋಕ್ ಅದಾಲತ್ ಮಾಡುವ ಮೂಲಕ ಇತ್ಯರ್ಥಗೊಳಿಸಲಾಗುತ್ತದೆ ಇತ್ಯರ್ಥಗೊಳ್ಳದ ಸಂದರ್ಭದಲ್ಲಿ ಅವುಗಳನ್ನು ಕಾನೂನು ರೀತಿಯಲ್ಲಿ ದಾವೆ ಹೂಡಬಹುದು ಎಂದುರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಬಸವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ, ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯ ಸಹಾಯಕ ಉಪನ್ಯಾಸಕಿ ವಸುಂದರಾ ಪಾಟೀಲ್ ವಕೀಲೆ ವಿಜಯಲಕ್ಷ್ಮಿ ಪಾಸೋಡಿ, ಹಿರಿಯ ಶ್ರೇಣಿ ದಿವಾಣಿ ನ್ಯಾಯದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಜನ್ ಆರ್.ಎ ಸೇರಿದಂತೆ ಇತರರು ಉಪಸ್ಥಿತರಿದ್ದರು.