ಪ್ರತಿಯೊಬ್ಬರಿಗೆ ಕಂಪ್ಯೂಟರ ಜ್ಞಾನ ಅಗತ್ಯ

ಕಲಬುರಗಿ,ಡಿ.1: ಪ್ರಸ್ತುತವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ ಬಳಸಲಾಗುತ್ತಿದೆ. ಇದರಿಂದ ಇಡೀ ವಿಶ್ವವೇ ಒಂದು ಚಿಕ್ಕ ಗ್ರಾಮವೆಂಬ ಪರಿಕಲ್ಪನೆ ಮೂಡಿದೆ. ಪ್ರತಿಯೊಂದು ಕೆಲಸಕ್ಕೆ ಕಂಪ್ಯೂಟರ ಜ್ಞಾನ ಅವಶ್ಯಕವಾಗಿರುವದರಿಂದ ಸಾಮಾನ್ಯ ಶಿಕ್ಷಣದ ಜೊತೆಗೆ ಕಂಪ್ಯೂಟರ ಶಿಕ್ಷಣ ಪಡೆಯುವುದು ಅಗತ್ಯವಾಗಿದೆ ಎಂದು ಕಂಪ್ಯೂಟರ ವಿಜ್ಞಾನ ಶಿಕ್ಷಕರಾದ ವಿಶ್ವನಾಥ ಶೇಗಜಿ ದಂಗಾಪುರ, ಶಿವಪ್ಪಗೌಡ್ ಎಸ್.ಪಾಟೀಲ ಬೊಮ್ಮನಳ್ಳಿ ಹೇಳಿದರು.
ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಸಿದ್ದಗಂಗಾ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ಕಂಪ್ಯೂಟರ ಶಿಕ್ಷಣ ಮತ್ತು ಭದ್ರತೆ ದಿನಾಚರಣೆ’ಯನ್ನು ಜಂಟಿಯಾಗಿ ಉದ್ಘಾಟಿಸಿ ಅವರು ಮಾತನಾಡಿದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಕಂಪ್ಯೂಟರ ಜ್ಞಾನ ಪಡೆದು ಬಳಸಬೇಕು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಅನೇಕ ಉಪಯುಕ್ತಕಾರಿ ಮಾಹಿತಿ ಕಂಪ್ಯೂಟರದಿಂದ ದೊರೆಯುತ್ತದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು. ಕಂಪ್ಯೂಟರನಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕಳ್ಳರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಕಂಪ್ಯೂಟರನ್ನು ಭದ್ರತೆಯೊಂದಿಗೆ ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಪರಮೇಶ್ವರ ದೇಸಾಯಿ, ಶರಣಬಸಪ್ಪ ಮಾಲಿ ಬಿರಾದಾರ ದೇಗಾಂವ, ಸಿದ್ದರಾಮ ಶೇಗಜಿ ದಂಗಾಪುರ, ರಾಜಶೇಖರ ಬಿರಾದಾರ ಬೊಮ್ಮನಳ್ಳಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.