ಪ್ರತಿಯೊಬ್ಬರಿಗೂ ಕಾನೂನು ಜಾಗೃತಿ ಅವಶ್ಯಕ


ಸಂಜೆವಾಣಿ ವಾರ್ತೆ
ಶಿವಮೊಗ್ಗ.ಮಾ.೨೦: ನ್ಯಾಯಾಲಯಕ್ಕೆ ಬರುವ 100 ಪ್ರಕರಣಗಳಲ್ಲಿ 50 ಪ್ರಕರಣಗಳು ಮನುಷ್ಯನ ದ್ವೇಷ, ಅಸೂಯೆ ಹಾಗೂ ದುರಾಸೆಗಳಿಗೆ ಸಂಬಂಧಿಸಿದ್ದು, ಉಳಿದ 50 ಪ್ರಕರಣಗಳು ಕಾನೂನಿನ ಕುರಿತು ಜನರಲ್ಲಿ ಇರುವ ಅಜ್ಞಾನದಿಂದ ಉಂಟಾಗಿರುತ್ತವೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಅಭಿಪ್ರಾಯಪಟ್ಟರು.ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1, 2 ಮತ್ತು 3ರ ವತಿಯಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸುವುದು ತುಂಬಾ ಮುಖ್ಯ ಆಗಿರುತ್ತದೆ ಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎನ್ ಚಂದನ್ ಮಾತನಾಡಿ, ಪ್ರತಿ ನಾಗರೀಕನೂ ತಮ್ಮ ಪ್ರದೇಶದ ಕಾನೂನಿನ ಅರಿವು ಹೊಂದಿರಬೇಕು. ಮುಂಜಾಗ್ರತೆಯನ್ನು ವಹಿಸಿದರೆ ಮನಸ್ಸಿಗಾಗುವ ನೋವು ಹಾಗೂ ಆರ್ಥಿಕವಾಗಿ ಉಂಟಾಗುವ ಸಮಸ್ಯೆ ಎರಡನ್ನೂ ಪರಿಹರಿಸಬಹುದು ಎಂದು ತಿಳಿಸಿದರು.
ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವಕುಮಾರ್ ಮಾತನಾಡಿ, ಜೀವನದಲ್ಲಿ ಪ್ರಯತ್ನ ಶೀಲರಾಗಿ ಹಾಗೂ ಉನ್ನತ ಸ್ಥಾನವನ್ನು ಗಳಿಸಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಎಸ್ ಜಗದೀಶ್ ವಹಿಸಿದ್ದರು. ಅಧ್ಯಕ್ಷೀಯ ನುಡಿಗಳನ್ನಾಡಿ, ಯುವ ಜನತೆಯು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಆದರೆ ಅವರು ಕಾನೂನನ್ನು ಪಾಲಿಸುವಂತವರಾಗಬೇಕು ಎಂದು ತಿಳಿಸಿದರು.ವಿಶೇಷ ಶಿಬಿರದ ಎರಡನೇ ದಿನ ಬೆಳಗ್ಗೆ 6ಕ್ಕೆ ಧ್ವಜಾರೋಹÀಣ ಕಾರ್ಯಕ್ರಮ ನೆರವೇರಿತು. ನಂತರ ಶಿಬಿರಾರ್ಥಿಗಳು ಶ್ರಮದಾನದಲ್ಲಿ ಪಾಲ್ಗೊಂಡರು. ಬೆಳಗ್ಗೆ 10ಕ್ಕೆ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗದ ವೈದ್ಯರು ಗ್ರಾಮಸ್ಥರಿಗಾಗಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿಕೊಟ್ಟರು.150 ಜನ ಗ್ರಾಮಸ್ಥರು ಹಾಗೂ ಸ್ವಯಂಸೇವಕರು ನೇತ್ರ ತಪಾಸಣಾ ಶಿಬಿರದ ಉಪಯೋಗವನ್ನು ಪಡೆದು ಕೊಂಡರು. ಸಂಜೆ ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗಾಗಿ ಕಾನೂನು ಅರಿವು ಮತ್ತು ನೆರವು ಎಂಬ ವಿಚಾರದ ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಗಣ್ಯರನ್ನು ಡೊಳ್ಳು ವಾದ್ಯ ಹಾಗೂ ಪೂರ್ಣ ಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಸಂಯೋಜನಾಧಿಕಾರಿ ಪ್ರೊ. ಕೆ.ಎಂ.ನಾಗರಾಜ್ ಹಾಜರಿದ್ದರು.