ಪ್ರತಿಯೊಬ್ಬರಿಗೂ ಕಲಿಕೆಯ ಹಸಿವಿರಬೇಕು: ನ್ಯಾ.ಶಿವಶಂಕರೇಗೌಡ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.27:- ಕಲಿಕೆಯ ಹಸಿವು, ಕಲಿಯುವ ಮನಸ್ಥಿತಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರಬೇಕು. ಅದು ಆತನ ಸರ್ವತೋಮುಖ ಅಭಿವೃದ್ದಿಗೆ ಸಹಕರಿಸುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಶನಿವಾರ ನಡೆದ ಪೆÇ್ರ.ಡಾ.ಸಿ.ಬಸವರಾಜು ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಟ್ಟಣ ಪ್ರದೇಶದಲ್ಲಿ ಓದಿದ ವಿದ್ಯಾರ್ಥಿಗಳು ತರಬೇತಿ, ಹೆಚ್ಚುವರಿ ತರಗತಿಗಳ ಮೊರೆ ಹೋಗುತ್ತಿದ್ದಾರೆ. ಅದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದ್ಯಾವುದಕ್ಕೂ ಅವಲಂಬಿತರಾಗದೇ ತಮ್ಮ ಸ್ವಂತ ಪರಿಶ್ರಮದಲ್ಲಿ ಕಲಿತು ರ್ಯಾಂಕ್ ಪಡೆಯುತ್ತಿದ್ದಾರೆ. ಇಂದು ಅನೇಕ ಕೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಲ್ಲಿ ಶೇ.99.9 ರಷ್ಟು ಜನ ಗ್ರಾಮೀಣ ಭಾಗದಿಂದ ಬಂದು ಓದಿದವರೇ. ಡಾ.ಸಿ. ಬಸವರಾಜು ಕೂಡ ಬಡ ಕುಟುಂಬದಿಂದ ಬಂದವರು. ಒಬ್ಬ ಸಾಮಾನ್ಯ ವ್ಯಕ್ತಿ ಈ ಮಟ್ಟಕ್ಕೆ ಬಂದು ಸಾಧನೆ ಮಾಡಲು ಅವರ ಸತತ ಪರಿಶ್ರಮ, ಶ್ರದ್ಧಾ ಮನೋಭಾವವೇ ಕಾರಣ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಓದಿದಂತಹ ವಿದ್ಯಾರ್ಥಿಗಳು ಯಾವ ಮಟ್ಟದಲ್ಲಾದರೂ ಸಾಧನೆ ಮಾಡಬಲ್ಲರು ಎಂಬುದು ಇವರ ಮೂಲಕ ಸಾಬೀತಾಗುತ್ತದೆ ಎಂದರು.
ನಡೆದು ಬಂದ ದಾರಿ ಮತ್ತು ನಮ್ಮ ಮೂಲವನ್ನು ಎಂದೂ ಮರೆಯಬಾರದು. ಅವೆಲ್ಲವೂ ಜೀವನದ ಪಾಠಗಳು. ನಮ್ಮ ಪರಿಸರದಲ್ಲಿರುವವರು ಉತ್ತಮ ಸ್ಥಿತಿಗೆ ಬಂದರೆ ಸಂಪೂರ್ಣ ಸಮಾಜ ಉತ್ತಮ ಸ್ಥಿತಿಗೆ ಬರಲು ಸಾಧ್ಯ. ನಮ್ಮ ದೇಶ ಯುವಕರ ದೇಶ. ಇಂದು ಶೇ.75ರಷ್ಟು ಜನ ದುಡಿಯುವವರಿದ್ದಾರೆ. ಆದರೆ, ಭವಿಷ್ಯದಲ್ಲಿ ನಮ್ಮದು ಮುದುಕರ ದೇಶವಾಗಬಹುದು ಎಂಬ ಸಾಮಾನ್ಯ ಆಲೋಚನೆ ಯಾರಿಗೂ ಇಲ್ಲ. ಭವಿಷ್ಯದ ಕುರಿತು ಯಾರೂ ಯೋಚಿಸುತ್ತಿಲ್ಲ . ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಈ ಕುರಿತು ಅಂದೇ ಯೋಚಿಸಿದ್ದರು. ಅವರು ಇಡೀ ಸಮಾಜಕ್ಕೆ ಆದರ್ಶನೀಯರು ಹಾಗೂ ಸ್ಪೂರ್ತಿ. ಅವರಂತೆ ಬಸವರಾಜು ಅವರ ಮನಸ್ಸು ಬಡವರಿಗಾಗಿ, ದೇಶದ ಒಳಿತಿಗಾಗಿ ಸದಾ ಮಿಡಿಯುವುದು ಎಂದರು.
ಸಾಹಿತಿ ಪೆÇ್ರ.ಪ್ರಧಾನ ಗುರುದತ್ತ ಮಾತನಾಡಿ, ಒಬ್ಬ ಸಾಧಾರಣ ವ್ಯಕ್ತಿ ಸಾಧನೆಯ ಮುಖಾಂತರ ಯಾವ ಮಟ್ಟಕ್ಕಾದರೂ ಏರಬಹುದು ಎಂಬುದಕ್ಕೆ ಬಸವರಾಜು ಅವರು ಇಂದು ನಿದರ್ಶನವಾಗಿದ್ದಾರೆ. ಒಬ್ಬ ವ್ಯಕ್ತಿಯ ಮಹತ್ತರ ಸಾಧನೆಯ ಅರಿವು ಮುಂದಿನ ಜನಾಂಗಕ್ಕೂ ಆಗಬೇಕಾಗಿದೆ. ಹೊಗಳಿಕೆಗೂ ಮೀರಿದ ಸಾಧನೆ ಮಾಡಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಡಾ.ಸಿ.ಬಸವರಾಜು, ಸಾಧಿಸಿದ್ದು ಅಲ್ಪ, ಸಾಧಿಸಬೇಕಾಗಿರುವುದು ಹೆಚ್ಚು. ಸಾಧನೆ ಮತ್ತು ಕಲಿಕೆಗೆ ಮಿತಿ ಎಂಬುದೇ ಇಲ್ಲ. ಇಂದು ಉನ್ನತ ಹುದ್ದೆಗಳಿಗೆ ಪ್ರವೇಶಿಸುವವರಲ್ಲಿ ಆದಿಕ ಮಂದಿ ತಳ ಸಮುದಾಯದಿಂದ ಬಂದವರು. ಅವರಿಗಷ್ಟೇ ಅವರ ನೋವು, ಬಡತನ ಅರ್ಥವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್.ರಂಗಪ್ಪ ಸೇರಿದಂತೆ ಹಲವರು ಇದ್ದರು.