ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲು ಡಿಕೆಶಿ ಒತ್ತಾಯ

ದಾವಣಗೆರೆ,ಜೂ.4: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಬ್ಬರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ನಗರದ ಶ್ರೀದುರ್ಗಾಂಭಿಕಾ ದೇವಸ್ಥಾನದ ಪ್ರಸಾದ ನಿಲಯದಲ್ಲಿಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಮನೆತನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಖುದ್ದು ತಾವೇ 2ನೇ ಡೋಸ್ ಲಸಿಕೆ ಪಡೆದು ಉಚಿತ ಕೊರೊನಾ ಲಸಿಕಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬರಿಗೂ ಸರ್ಕಾರವೇ ಉಚಿತ ಲಸಿಕೆ ನೀಡಬೇಕೆಂಬುದು ಕಾಂಗ್ರೆಸ್ ಪಕ್ಷದ ಒತ್ತಾಯವಾಗಿದೆ. ಆದರೆ, ಸರ್ಕಾರ ಇದಕ್ಕೆ ಗಮನ ಹರಿಸುತ್ತಿಲ್ಲ. ಆದ್ದರಿಂದ ಇಂದು ಸಂಜೆ 5 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ, ಈ ಬಗ್ಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.
ಲಸಿಕೆ ನೀಡಲು 90 ಜನ ಕಾಂಗ್ರೆಸ್ ಶಾಸಕರು ತಮ್ಮ ಅನುದಾನದಲ್ಲಿ 100 ಕೋಟಿ ಹಣವನ್ನು ಲಸಿಕೆ ತರಲು ನೀಡುತ್ತೇವೆಂದು ಹೇಳಿದರೂ ಸಹ ಸರ್ಕಾರ ಅವಕಾಶ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಅವರ ಮನೆಯಿಂದ ತಂದುಕೊಡುತ್ತಾರಾ ಎಂದು ಉದ್ಧಟತನದ ಮಾತುಗಳನ್ನಾಡುತ್ತಾರೆ. ಹಾಗದರೆ, ಕೊರೊನಾ ನಿಯಂತ್ರಣಕ್ಕಾಗಿ ಖರ್ಚು ಮಾಡುತ್ತಿರುವ ಹಣವನ್ನು ಇವರ ಜೇಬಿನಿಂದ ತೆಗೆದು ಕೊಡುತ್ತಾರಾ ಎಂದು ಪ್ರಶ್ನಿಸಿದರು.
ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆದರೆ, ಜೀವತಾವಧಿಯಲ್ಲಿ ಏನು ಕೆಲಸ ಮಾಡಿದ್ದೇವೆ ಅನ್ನುವುದು ಮುಖ್ಯವಾಗಲಿದೆ. ಇಡೀ ಪ್ರಪಂಚವನ್ನೇ ಕೊರೊನಾ ಮಹಾಮಾರಿ ಕೊಲ್ಲುತ್ತಿದೆ. ದೇಶ ಸೋಂಕಿನಿAದ ನಲುಗಿ ಹೋಗಿದೆ. ಆದರೆ, ಸರ್ಕಾರ ಲಸಿಕೆ ಹಾಕಲು ಮೀನಾ ಮೇಷ ಎಣಿಸುತ್ತಿದೆ. ಹೀಗಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕುಟುಂಬದವರು ತಮ್ಮ ಸ್ವಂತ ಖರ್ಚಿನಲ್ಲಿ 3 ಲಕ್ಷ ಡೋಸ್ ಲಸಿಕೆಯನ್ನು ಉಚಿತವಾಗಿ ಕೊಡಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹೇಳಿದರು.
ನಾನು ಎಷ್ಟೋ ಜನ ಶ್ರೀಮಂತರನ್ನು ನೋಡಿದ್ದೇನೆ. ಆದರೆ, ಶಾಮನೂರು ಶಿವಶಂಕರಪ್ಪನವರAತೆ ಹೃದಯ ಶ್ರೀಮಂತಿಕೆ ಇರುವುವವರನ್ನು ನೋಡಿಲ್ಲ. ತಮ್ಮ ಸ್ವಂತ ಖರ್ಚಿನಲ್ಲಿ ಜನರ ಜೀವ ಉಳಿಸುವ ಧರ್ಮದ ಕೆಲಸ ಮಾಡುತ್ತಿರುವುದು. ಇಡೀ ದೇಶಕ್ಕೆ ಮಾದರಿಯಾಗಿದೆ. ಮುಂದಿನ ಜನ್ಮದಲ್ಲಿ ಶಾಮನೂರು ಶಿವಶಂಕರಪ್ಪನವರAತೆ ಹೃದಯ ಶ್ರೀಮಂತಿಕೆ ಇರುವವರು ಹುಟ್ಟಲಿ ಎಂದು ಆಶಿಸಿದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಕೊರೊನಾ ಬಾರದಂತೆ ತಡೆಯಲು ವ್ಯಾಕ್ಸಿನ್ ನೀಡುವುದು ಮುಖ್ಯವಾಗಿದೆ. ಆದರೆ, ಸರ್ಕಾರ ಲಸಿಕೆ ಇಲ್ಲ, ಇವತ್ತು ಕೊಡ್ತಿವಿ ನಾಳೆ ಕೊಡ್ತಿವಿ ಎಂದು ಹೇಳಲಾರಂಭಿಸಿತು. ಆಗ ನಾವು ದಾವಣಗೆರೆಯ ಜನರಿಗೆ ಎಷ್ಟು ಲಸಿಕೆ ಬೇಕೋ ಅಷ್ಟು ಲಸಿಕೆ ತರಸಿ ನಾವು ಅರ್ಧ ಹಣ ನೀಡುತ್ತೇವೆ ಅಂದಾಗ, ಜಿಲ್ಲಾಡಳಿತ ಕಿವಿಗೊಡಲಿಲ್ಲ. ಹೀಗಾಗಿ ನಾವೇ ಲಸಿಕೆ ಕೊಡಿಸಲು ಮುಂದಾಗಿದ್ದೇವೆ ಎಂದರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಮೊದಲ ಹಂತದಲ್ಲಿ 10 ಸಾವಿರ ಡೋಸ್ ಲಸಿಕೆ ನೀಡುತ್ತಿದ್ದು, ಜೂನ್ 10 ರಂದು ಮತ್ತೆ 50 ಸಾವಿರ ಡೋಸ್ ಲಸಿಕೆ ಬರಲಿದೆ. ಇಂದು ಸಾಂಕೇತಿಕವಾಗಿ ಲಸಿಕೆ ಶಿಬಿರಕ್ಕೆ ಚಾಲನೆ ನೀಡಿದ್ದು, ನಾಳೆಯಿಂದ ನಗರದ ಐದು ಕಡೆಗಳಲ್ಲಿ ಉಚಿತ ಲಸಿಕೆ ವಾರ್ಡುವಾರು ಲಸಿಕೆ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್, ಕೆ.ಸಿ.ಕೊಂಡಯ್ಯ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಮುಖಂಡರಾದ ಸಚಿನ್ ಮಿಗಾ, ಎಚ್.ಬಿ.ಮಂಜಪ್ಪ, ಡಿ.ಬಸವರಾಜ್, ದಿನೇಶ್ ಕೆ ಶೆಟ್ಟಿ, ಎ.ನಾಗರಾಜ್, ಅಯೂಬ್ ಪೈಲ್ವಾನ್ ಮತ್ತಿತರರು ಹಾಜರಿದ್ದರು.