ಪ್ರತಿಯೊಬ್ಬರಲ್ಲಿ ಸಾಮರಸ್ಯ ಮನೋಭಾವ ಬೆಳೆಯಲಿ

ಕಲಬುರಗಿ,ಅ.27: ಮಾನವರೆಲ್ಲರೂ ಒಂದೆಯಾಗಿದ್ದಾರೆ. ಹುಟ್ಟಿದ ಧರ್ಮ, ಜಾತಿಗಳ ಆಧಾರದ ಮೇಲೆ ಮೇಲು-ಕೀಳು, ದೊಡ್ಡದು, ಚಿಕ್ಕದೆಂಬ ಭಾವನೆಗಳು ಮನುಷ್ಯನ ವ್ಯಕ್ತಿತ್ವ ಕುಗ್ಗಿಸುತ್ತವೆ. ಆದ್ದರಿಂದ ಇವೆಲ್ಲವುಗಳನ್ನು ಮೀರಿ, ಉನ್ನತವಾದ ವ್ಯಕ್ತಿತ್ವ ನಮ್ಮದಾಗಿಸಿಕೊಳ್ಳಬೇಕು. ಎಲ್ಲಾ ಮಹಾತ್ಮರು ಸಮಾಜಕ್ಕೆ ನೀಡಿದ ವಿಶ್ವಭ್ರಾತೃತ್ವ ಮೌಲ್ಯಗಳು ಒಂದೆಯಾಗಿದ್ದು, ಅವುಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರು ಸಾಮರಸ್ಯ ಭಾವದಿಂದ ಬದುಕುವುದು ಇಂದಿನ ಅವಶ್ಯಕವಾಗಿದೆಯೆಂದು ಹಿರಿಯ ಸಾಹೀಬ್ ಜಾನಿ ಶಹ ಬಾಬಾ ಅಭಿಪ್ರಾಯಪಟ್ಟರು.
ಅವರು ನಗರದ ಮೆಹಬೂಬ್ ನಗರದಲ್ಲಿನ ಚಿಸ್ತಿಯಾ ಮನೆಯ ಪ್ರಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಈದ ಮಿಲಾದ : ಕೋಮು ಸಾಮರಸ್ಯ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾನವರೆಲ್ಲರೂ ಒಂದೆ ದೇವರ ಮಕ್ಕಳು. ದೇವನೊಬ್ಬ, ನಾಮ ಹಲವು. ನಾವು ಬರುವಾಗ ಏನು ತಂದಿಲ್ಲ. ಹೋಗುವಾಗ ಏನು ತೆಗೆದುಕೊಂಡು ಹೋಗುವುದಿಲ್ಲ. ಇರುವಷ್ಟು ದಿವಸಗಳಲ್ಲಿ ನಾವೆಲ್ಲರೂ ಕೂಡಿ ಬಾಳೋಣ. ಕಲಹ, ಜಗಳವಾಡಿದರೆ ಯಾವುದೇ ಪ್ರಯೋಜನೆಯಿಲ್ಲ. ಎಲ್ಲರೂ ಜೊತೆಗೂಡಿ ಸಾಗಬೇಕು. ಪ್ರತಿಯೊಬ್ಬರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಬೆಳೆಸಿಕೊಂಡು ಹೋಗಬೇಕು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನ ಈದ್ ಮಿಲಾದ ಆಗಿದ್ದು, ಶಾಂತಿ, ಸಹೋದರತೆ, ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ ಆಚರಿಸಲಾಗುತ್ತದೆ. ಪ್ರವಾದಿ ಅವರ ಸಂದೇಶ ಮನುಕುಲದ ಸಮೃದ್ಧಿಗೆ ಪೂರಕವಾಗಿದೆಯೆಂದರು.
ಮತ್ತೋರ್ವ ಸಾಹೀಬ್ ಹಜರತ್ ಆದಾಮ್ ಅಲಿ ಶಹ ಬಾಬಾ ಮಾತನಾಡಿ, ಎಲ್ಲಾ ಧರ್ಮಗಳ ತಿರುಳು ಒಂದೆಯಾಗಿದೆ. ಅದನ್ನು ಅರಿಯದ ನಾವು ಕಚ್ಚಾಟದಲ್ಲಿ ತೊಡಗಿರುವುದು ವಿಷಾದನೀಯ ಸಂಗತಿಯಾಗಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಅನ್ಯಾಯ, ಅಧರ್ಮ, ಶೋಷಣೆ ವಿರುದ್ಧ ಇಡೀ ತಮ್ಮ ಜೀವನದುದ್ದಕ್ಕೂ ಶ್ರಮಿಸಿದವರು. ಇಂತಹ ಎಲ್ಲ ಮಹನೀಯರ ಸಂದೇಶವನ್ನು ಅರ್ಥಮಾಡಿಕೊಂಡು ನಾವೆಲ್ಲರೂ ಸಹ ಜೀವನ ಸಾಗಿಸೋಣ. ಉಭಯ ಸಂಸ್ಥೆಯವರು ಇಂಥ ಕೋಮು ಸಾಮರಸ್ಯ ಬೆರೆಯುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಚ್.ಬಿ.ಪಾಟೀಲ, ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಅಧ್ಯಕ್ಷ ಸುನೀಲಕುಮಾರ ವಂಟಿ, ಪ್ರಮುಖರಾದ ಸೈಯದ್ ಇಸ್ಮೈಲ್, ಅಬ್ದುಲ್ ಅರಬಸ್, ಡಾ.ಸರ್ಫರಾಜ್ ಖಾನ್, ನದೀಮ್ ಖಾನ್, ಅಬ್ದುಲ್ ರಹೀಮ್, ಅಬ್ದುಲ್ ರೆಹಮಾನ ಶಹ, ಮೆಹಬೂಬ್ ನರೋಣಾ ಸೇರಿದಂತೆ ಹಲವರು ಭಾಗವಹಿಸಿದ್ದರು.