ಪ್ರತಿಯೊಬ್ಬರಲ್ಲಿ ಸಾಕ್ಷರತೆಯ ಅರಿವು ಮೂಡಿಸಬೇಕು:ಜಿಲ್ಲಾಧಿಕಾರಿ ಯಶವಂತ ಗುರುಕರ್

ಕಲಬುರಗಿ.ಸೆ.14:ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಬಹು ಮುಖ್ಯ. ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಎಲ್ಲಾ ಯೋಜನೆಗಳು ಜನರಿಗೆ ತಲುಪಿಸಬೇಕಾದರೆ ಶಿಕ್ಷಣದ ಅರಿವು ಇರಬೇಕಾಗುತ್ತದೆ. ಆಗ ಪ್ರತಿಯೊಬ್ಬರು ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಕಲಬುರಗಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಯಶವಂತ ವಿ. ಗುರುಕರ್ ಹೇಳಿದರು.
ಬುಧವಾರದಂದು ನಗರದ ಕಲಬುರಗಿ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಲೋಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಲಬುರಗಿ, ಜಿಲ್ಲಾ/ ತಾಲೂಕು ಲೋಕ ಶಿಕ್ಷಣ ಸಮಿತಿ, ಕಲಬುರಗಿ ಮಹಾನಗರ ಪಾಲಿಕೆ, ಕಲಬುರಗಿ ಹಾಗೂ ಸರಕಾರಿ ಶಿಕ್ಷಕರ ಮಹಾವಿದ್ಯಾಲಯ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ 56ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ/ಸಪ್ತಾಹ ಕಾರ್ಯಕ್ರಮದ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.
ಕಲಬುರಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಮದಾನೆ ಸೂರ್ಯಕಾಂತ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಬಹುಮುಖ್ಯ ಅಂಶವಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ತಾಲೂಕಾ ಮಟ್ಟದಲ್ಲಿ ತಾಲೂಕಾ ಲೋಕ ಶಿಕ್ಷಣ ಸಮಿತಿಯವರು ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ ಗ್ರಾಮ ಪಂಚಾಯತ ಲೋಕ ಶಿಕ್ಷಣ ಸಮಿತಿಯವರು ಮತ್ತು ಬಿ.ಆರ್.ಸಿ ಹಾಗೂ ಸಿ.ಆರ್.ಸಿ ಶಾಲಾ ಮುಖ್ಯ ಶಿಕ್ಷಕರು ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಅನಕ್ಷರಸ್ಥರನ್ನು ಗುರುತಿಸಿ ಅವರಿಗೆ ಶಿಕ್ಷಣ ಒದಗಿಸುವುದರಲ್ಲಿ ಸಹಾಯ ಮಾಡಬೇಕು ಎಂದರು.
ಉಪನ್ಯಾಸಕ ಗುರಣ್ಣ ಗುಂಡಗುರ್ತಿ ಅವರು ಮಾತನಾಡಿ, ಈ ವರ್ಷ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು “ಸಾಕ್ಷರತೆಯ ಕಲಿಕೆಯ ಸ್ಥಳಗಳನ್ನು ಪರಿವರ್ತಿಸುವುದು; ಅವಕಾಶಗಳು ಮತ್ತು ಸಾಧ್ಯತೆಗಳನ್ನು ಅನ್ವೇಷಿಸುವುದು ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅನಕ್ಷರತೆ ಹೊಗಲಾಡಿಸಲು ವಿವಿಧ ಮೂಲ ಸಾಕ್ಷರತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರು ಉಮಾ ದೇವಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಸಮನ್ವಯ ಅಧಿಕಾರಿ ಚಂದ್ರಶೇಖರ ಪಾಟೀಲ, ಕಾರ್ಯಕ್ರಮದ ಸಹಾಯಕರು ಶಿವಾನಂದ ಚವ್ಹಾಣ, ಸಾಕ್ಷರತಾ ಕಲಾವಿದರು ಬಂಡಯ್ಯ ಹಿರೇಮಠ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.