ಪ್ರತಿಯೊಬ್ಬರಲ್ಲಿ ಪರಿಸರ ಪ್ರಜ್ಞೆ ಮೂಡಲಿ -ಲಲಿತಮ್ಮ.

ಕೂಡ್ಲಿಗಿ.ಜೂ. 5 :- ಪರಿಸರ ಪ್ರಜ್ಞೆ ಮತ್ತು ಕಾಳಜಿ ಪ್ರತಿಯೊಬ್ಬರಲ್ಲಿ ಮೂಡಿದಾಗ ಮಾತ್ರ ಉತ್ತಮ ಪರಿಸರ ಕಾಣಲು ಸಾಧ್ಯ ಎಂದು ತಾಲೂಕಿನ ಗುಡೇಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಗುಡೇಕೋಟೆ ಕರಡಿಧಾಮ ವ್ಯಾಪ್ತಿಯ ಅರಣ್ಯ ವಲಯದಲ್ಲಿ ಗುಡೇಕೋಟೆ ಅರಣ್ಯ ಇಲಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತ ಪ್ರತಿಯೊಬ್ಬರೂ ಒಂದೊಂದು ಸಸಿ ನೆಡಿ ಪರಿಸರ ಬೆಳೆಸಿ ಉಳಿಸಬೇಕಿದೆ ಉತ್ತಮ ಪರಿಸರದ ವಾತಾವರಣ ನಿರ್ಮಾಣದಿಂದ ಉತ್ತಮ ಆರೋಗ್ಯ ಸೃಷ್ಟಿಯಾಗಬಲ್ಲದು ಎಂದು ಲಲಿತಮ್ಮ ತಿಳಿಸಿದರು. ಗುಡೇಕೋಟೆ ವಲಯಾರಣ್ಯಾಧಿಕಾರಿ ರೇಣುಕಾ ಮಾತನಾಡಿ ಕೂಡ್ಲಿಗಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸಸಿಗಳ ಸಂರಕ್ಷಣೆ ಮಾಡಿ ಉತ್ತಮ ಪರಿಸರವನ್ನು ನಿರ್ಮಿಸಲಾಗುತ್ತಿದ್ದು ಅರಣ್ಯ ನಾಶವಾಗದಂತೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಮತ್ತು ಕಾಡು ಪ್ರಾಣಿಗಳ ರಕ್ಷಣೆ ಕುರಿತು ಅನೇಕ ಜಾಗೃತಿ ಮತ್ತು ಅರಿವಿನ ಕಾರ್ಯಕ್ರಮ ನಡೆಸಿ ಜನರಲ್ಲಿ ಪರಿಸರ ಪ್ರೇಮ ಮೂಡಿಸುತ್ತಿದ್ದು ಜನರಲ್ಲಿ ಪರಿಸರ ಕಾಳಜಿ ಮೂಡುತಿದ್ದು ಕೊರೋನಾದಂತಹ ಮಹಾಮಾರಿ ತೊಲಗಿಸಲು ಉತ್ತಮ ಪರಿಸರದಿಂದ ಮಾತ್ರ ಸಾಧ್ಯ ಎಂದು ಅರಿತು ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಬೆಳೆಸಿ ಉಳಿಸುವ ಕಾರ್ಯಕ್ಕೆ ಇಂದೇ ಎಲ್ಲರೂ ಶಪಥಗೈಯ್ಯೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗುಡೇಕೋಟೆ ವಲಯದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.