ಪ್ರತಿಯೊಬ್ಬರಲ್ಲಿ ದೇಶಾಭಿಮಾನ ಬೆಳೆಸಿಕೊಳ್ಳುವುದು ಅಗತ್ಯ

ಕಲಬುರಗಿ.ಆ.4: ನಮ್ಮ ದೇಹ ಯಾವ ರೀತಿ ಸಂರಕ್ಷಣೆ ಮಾಡಿಕೊಳ್ಳುತ್ತೆಯೋ, ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ದೇಶಾಭಿಮಾನ, ಭಕ್ತಿ, ಗೌರವ, ಪ್ರೀತಿ ಬೆಳೆಸಿಕೊಂಡು, ದೇಶದ ಸಂರಕ್ಷಣೆ ಮಾಡಬೇಕು. ಅವರವರ ಕ್ಷೇತ್ರದ ಮೂಲಕವೇ ಉನ್ನತವಾದ ಸಾಧನೆಯನ್ನು ಮಾಡುವ ಮೂಲಕ ತಾಯಿ ಭಾರತಾಂಬೆಯ ಕೀರ್ತಿಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ವೃದ್ಧಿಸುವ ಕಾರ್ಯ ಮಾಡಲು ಪಣ ತೊಡಬೇಕಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ‘ಆಜಾದಿ ಕಾ ಅಮೃತ ಮಹೋತ್ಸವ’ ಅಂಗವಾಗಿ ಗುರುವಾರ ಏರ್ಪಡಿಲಾಗಿದ್ದ ‘ಗೀತಗಾಯನ, ಭಾಷಣ ಮತ್ತು ಪ್ರಬಂಧ ಬರವಣಿಗೆ’ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲೇಜಿನ ಉಪನ್ಯಾಸಕಿ ಶರಣಮ್ಮ ಭಾವಿಕಟ್ಟಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಸೋಲು-ಗೆಲವು ಪ್ರಮುಖವಲ್ಲ. ಬದಲಿಗೆ ಸಕ್ರಿಯವಾಗಿ ಭಾಗವಹಿಸುವಿಕೆ ಮುಖ್ಯವಾಗಿದೆ. ಅದಕ್ಕೆ ಎನ್.ಎಸ್.ಎಸ್ ವೇದಿಕೆಯಾಗಿದೆ. ಪ್ರಸ್ತುತ ವರ್ಷ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯಾಗಿರುವುದರಿಂದ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪೂರಕರ್, ರವೀಂದ್ರಕುಮಾರ ಬಟಗೇರಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಪ್ರ.ದ.ಸ ನೇಸರ ಎಂ.ಬೀಳಗಿ, ನಿಯೋಜಿತ ಉಪನ್ಯಾಸಕ ಸಿದ್ದಾರೂಢ ಬಿರಾದಾರ, ಅತಿಥಿ ಉಪನ್ಯಾಸಕಿ ರಂಜಿತಾ ಠಾಕೂರ್, ಸೇವಕ ಭಾಗಣ್ಣ ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.