ಪ್ರತಿಯೊಬ್ಬರಲ್ಲಿ ಓದುವ ಹವ್ಯಾಸ ಬೆಳೆಯಲಿ

ಕಲಬುರಗಿ:ನ.17: ಜ್ಞಾನಕ್ಕಿಂತ ದೊಡ್ಡ ಸಂಪತ್ತು ಹಾಗೂ ಶಕ್ತಿ ಬೇರೊಂದಿಲ್ಲ. ಇದು ವ್ಯಕ್ತಿಯನ್ನು ಶಕ್ತಿಯನ್ನಾಗಿಸುತ್ತದೆ. ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂಥಹ ಅಮೂಲ್ಯವಾದ ಸಂಪತ್ತನ್ನು ಪ್ರತಿಯೊಬ್ಬರು ಪಡೆಯಬೇಕಾದರೆ ನಿರಂತರವಾಗಿ ಉತ್ತಮವಾದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ರಾಮಮಂದಿರ ಸಮೀಪವಿರುವ ‘ಕೊಹಿನೂರ ಡಿಗ್ರಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಗ್ರಂಥಾಲಯ ಸಪ್ತಾಹ’ ಆಚರಣೆ ಕಾರ್ಯಕ್ರಮವನ್ನು ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್‍ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
‘ಗ್ರಂಥಾಲಯಗಳು ಜೀವಂತ ದೇವಾಲಯಗಳು’, ‘ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ಶರೀರವಿದ್ದಂತೆ’ ಎಂಬ ಮಾತು ಗ್ರಂಥಾಲಯದ ಮಹತ್ವವನ್ನು ಸಾರುತ್ತವೆ. ಪ್ರತಿಯೊಂದು ಶಾಲಾ-ಕಾಲೇಜು, ಮತ್ತಿತರ ಶಿಕ್ಷಣ ಸಂಸ್ಥೆಯಲ್ಲಿ ಗ್ರಂಥಾಲಯ ಕಡ್ಡಯವಾಗಿ ಇರಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳನ್ನು ಮಾತ್ರ ಅದ್ಯಯನ ಮಾಡಿದರೆ ನಿಮ್ಮ ವ್ಯಕ್ತಿತ್ವ ವಿಕಸನವಾಗಲಾರದು. ಪಠ್ಯ ಪುಸ್ತಕಗಳ ಜೊತೆಗೆ ದಿನ ಪತ್ರಿಕೆಗಳು, ಮಹಾನ ವ್ಯಕ್ತಿಗಳ, ಸಾಧಕರ ಚರಿತ್ರೆ, ನೀತಿ ಕಥೆಗಳು ಸೇರಿದಂತೆ ವಿವಿಧ ಪ್ರಕಾರದ ಪುಸ್ತಕಗಳನ್ನು ಅಧ್ಯಯನ ಮಾಡಬೇಕು.
ಕಾಲೇಜಿನ ಪ್ರಾಂಶುಪಾಲ ಡಾ.ಹಣಮಂತರಾಯ ಬಿ.ಕಂಟೆಗೋಳ್ ಮಾತನಾಡಿ, ಈಗಿನ ಯುವಕರು ಮತ್ತು ನಾಗರಿಕರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ‘ಪುಸ್ತಕಗಳು ಜ್ಞಾನದ ದೀವಿಗೆ’ ಇದ್ದಂತೆ. ಇವು ಬಾಳನ್ನು ಬೆಳಗಿಸುತ್ತವೆ. ಪುಸ್ತಕಗಳನ್ನು ನಾವು ಹೆಚ್ಚು ಓದಿದಷ್ಟು ನಮ್ಮ ಅರಿವು ಮತ್ತು ಜ್ಞಾನದ ವ್ಯಾಪ್ತಿ ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಗಳಾದ ರಾಜಕುಮಾರ ಬಿರಾದಾರ, ಆಕಾಶ ಮೂಲಗೆ, ಜಗದೀಶ ಹಿರೇಮಠ, ಭೀಮಾಶಂಕರ ಜಮಾದಾರ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಚಂದ್ರಕಾಂತ ಎಂ.ಅಂದಾನಿ, ಪ್ರದೀಪ ಎಂ.ಅಂದಾನಿ, ವಿನೋದಕೆ., ರವಿ, ವಿಶಾಲ ಎಸ್.ಪಾಟೀಳ,, ಮಲ್ಲಿಕಾರ್ಜುನ ಆರ್.ಪಾಟೀಲ, ಸಿದ್ದಾರೂಡ ಪಾಟೀಲ, ನಿತೀನ್ ಗುತ್ತೇದಾರ, ಶರಣಬಸಪ್ಪ ಎಂ.ಕಪನೂರ, ಸಾಗರ ಚವ್ಹಾಣ, ಆಕಾಶ ಚವ್ಹಾಣ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.