
ಕಲಬುರಗಿ:ಎ.8: ರೋಗ ಬಂದು ಔಷಧಿ ಸೇವನೆ, ಆಸ್ಪತ್ರೆಗೆ ತೆರಳುವ ಸಂದರ್ಭಕ್ಕೆ ಅವಕಾಶ ಮಾಡಿಕೊಡಬೇಡಿ. ಪೌಷ್ಠಿಕಾಂಶಗಳುಳ್ಳ ಆಹಾರ, ಶುದ್ಧವಾದ ನೀರಿನÀ ಸೇವನೆ, ವ್ಯಾಯಾಮ, ಯೋಗ, ಸಕಾರಾತ್ಮಕ ಚಿಂತನೆ ಸೇರಿದಂತೆ ಮುಂತಾದ ಆರೋಗ್ಯಕರ ಜೀವನಶೈಲಿ ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು, ಪ್ರತಿಯೊಬ್ಬರು ತಮ್ಮ ಆರೋಗ್ಯ ಬಗ್ಗೆ ಜಾಗೃತಿ ವಹಿಸಬೇಕೆಂದು ಆರೋಗ್ಯ ಅಧಿಕಾರಿ ಡಾ.ಪ್ರಮೋದ ಗುಂಡಗುರ್ತಿ ಸಲಹೆ ನೀಡಿದರು.
ನಗರದ ಹೀರಾಪುರ ಕ್ರಾಸ್ ಸಮೀಪದಲ್ಲಿರುವ 'ಸಿದ್ದಾರ್ಥ ನಗರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ' ಮತ್ತು 'ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ' ಇವುಗಳ ವತಿಯಿಂದ ಸಮಾಜ ಸೇವಕ ದತ್ತು ಭಂಡಾರಿ ಅವರ ಜನ್ಮದಿನಾಚರಣೆಯಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ 'ವಿಶ್ವ ಆರೋಗ್ಯ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾನವ ಎಷ್ಟೆಲ್ಲಾ ಭೌತಿಕ ಸಂಪತ್ತು ಗಳಿಸಿದರು ಕೂಡಾ, ಅವುಗಳನ್ನು ಅನುಭವಿಸಲು ಅರೋಗ್ಯ ಇರದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ. ಮನೆಯಲ್ಲಿ ತಯಾರಿಸಿದ ತಾಜಾ ಆಹಾರ, ಪೌಷ್ಠಕಾಂಶಗಳುಳ್ಳ ಆಹಾರ, ತರಕಾರಿ, ಹಣ್ಣುಗಳನ್ನು ಸೇವಿಸಿ. ಶುದ್ದವಾದ ನೀರನ್ನು ಯತೇಚ್ಛವಾಗಿ ಕುಡಿಯಿರಿ. ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡಿ. ಎಣ್ಣೆಯಲ್ಲಿ ಕರಿದ, ಬೇಯಿಸಿದ ಆಹಾರ, ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ಮಾಡಬೇಡಿ. ಮೋಬೈಲ್ ಬಳಕೆ, ಟಿ.ವಿ.ವೀಕ್ಷಣೆ ಅತ್ಯಂತ ಕಡಿಮೆ ಪ್ರಮಾಣದಲ್ಲಿರಲಿಯೆಂದು ಆರೋಗ್ಯಕ್ಕೆÀ ಸಂಬಂಧಿಸಿದ ಹಲವಾರು ಸಲಹೆ-ಸೂಚನೆಗಳನ್ನು ನೀಡಿದರು.
ಸಮಾಜ ಸೇವಕ ಸುನೀಲಕುಮಾರ ವಂಟಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೂ ಕೂಡಾ ಕರೋನಾದಂತಹ ಹೊಸ ರೋಗಗಳು ಉಂಟಾಗುತ್ತಿವೆ. ಮನುಷ್ಯ ಯಾಂತ್ರಿಕ ಬದುಕು ಸಾಗಿಸುತ್ತಿದ್ದಾನೆ. ಅನಿಯಮಿತ ದುಡಿಮೆ, ಆಹಾರ ಪದ್ದತಿ, ಆರೋಗ್ಯದ ಕಡೆ ಗಮನ ಹರಿಸದೆ ಅನಾರೋಗ್ಯಕ್ಕೆ ಈಡಾಗುತ್ತಿರುವುದು ಕಂಡು ಬರುತ್ತಿದ್ದು. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೈದ್ಯರು, ಆರೋಗ್ಯ ಸಂಸ್ಥೆಯ ಸಲಹೆಗಳನ್ನು ಅನುಸರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಸುನೀಲಕುಮಾರ ಎಂಟಮನಿ, ಅನೀಲಕುಮಾರ ಎಂಟಮನಿ, ರಾಜೇಶ್ವರಿ, ಪ್ರಕಾಶ ಕಾಂಬಳೆ, ಆಕಾಶ ರೇವೂರ, ಸತೀಶ ಎಂಟಮನಿ, ಮಂಜುನಾಥ ಚೌಧರಿ, ಅಶೋಖ ಮಣೂರೆ, ರೇಣುಕಾ, ಸುಜಯ್ ಎಸ್.ವಂಟಿ ಸೇರಿದಂತೆ ಬಡಾವಣೆಯ ಜನರು ಭಾಗವಹಿಸಿದ್ದರು.