ಪ್ರತಿಯೊಂದು ವಸತಿ ನಿಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಃ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ

ವಿಜಯಪುರ, ಮಾ.20-ವಸತಿ ನಿಲಯಗಳಲ್ಲಿ ನಿಯಮ ಅನುಸಾರ ಪೂರೈಸಬೇಕಾದ ಸೌಕರ್ಯಗಳನ್ನು ಒದಗಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಇಂದು ಸರ್ಕಾರಿ ಹಾಸ್ಟೆಲ್‍ಗಳ ವ್ಯವಸ್ಥೆಗಳ ಬಗ್ಗೆ ಚರ್ಚಿಸುವ ಸಂಬಂಧ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಜಿಲ್ಲೆಯಲ್ಲಿಯ ಪ್ರತಿಯೊಂದು ವಸತಿ ನಿಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಪ್ರತಿ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ನೀಡುವುದು ಮತ್ತು ವಿದ್ಯಾರ್ಥಿಗಳ ಹಾಜರಾತಿ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವುದಕ್ಕೆ ವಸತಿ ನಿಲಯಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವಂತೆ ಸೂಚಿಸಿ ವಸತಿ ನಿಲಯಗಳಲ್ಲಿ ಸ್ವಚ್ಛತೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಎಂದು ಸೂಚನೆ ನೀಡಿದರು.
ನಿಯಮ ಬಾಹಿರ ಚಟುವಟಿಕೆ ಪ್ರೇರೇಪಿಸುವ, ಕರ್ತವ್ಯಲೋಪ ಎಸಗುವ ಇಲಾಖೆ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ವಿದ್ಯಾರ್ಥಿಗಳ ನಡುವಳಿಕೆ, ವಿದ್ಯಾರ್ಥಿಗಳು ಕಾಲೇಜು ಗೈರು ಹಾಜರಾತಿ ಇವುಗಳ ಬಗ್ಗೆ ನಿಯಮ ಅನುಸಾರ ನಿಗಾವಹಿಸಲು ಸೂಚಿಸಿದರು.
ವಸತಿನಿಲಯದ ವಾತಾವರಣವನ್ನು ಕೆಡಿಸುವ ಚಟುವಟಿಕೆಗಳನ್ನು ನಿಬರ್ಂಧಿಸಿ, ಅನಧಿಕೃತ ವ್ಯಕ್ತಿಗಳ ಮೇಲೆ ಕ್ರಮಗಳನ್ನು ಕೈಗೊಳುವಂತೆ ಹಾಗೂ ಅತ್ಯಂತ ಸುವ್ಯವಸ್ಥಿತವಾಗಿ ವಿದ್ಯಾರ್ಥಿಗಳಿಗೆ ಒಳ್ಳೆಯ ವಾತಾವರಣ ನಿರ್ಮಿಸುವಂತೆ ಅವರು ಸೂಚಿಸಿದರು.
ಸಿಬ್ಬಂದಿಗಳ ಅಸಮರ್ಪಕ ನಿರ್ವಹಣೆ ತಡೆಗಟ್ಟಲು ಉಪವಿಭಾಗದ ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳು, ಪೆÇಲೀಸ್ ಉಪಅಧೀಕ್ಷಕರು ಹಾಗೂ ಉಪನಿರ್ದೇಶಕರನ್ನು ಒಳಗೊಂಡ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗುವುದು. ಈ ಸಮಿತಿಯು ತಿಂಗಳಿಗೊಮ್ಮೆ ವಸತಿ ನಿಲಯಗಳನ್ನು ಭೇಟಿ ನೀಡಿ ವಸತಿನಿಲಯಗಳ ಸುಧಾರಣೆಗಾಗಿ ಕ್ರಮಕೈಗೊಳ್ಳಬೇಕೆಂದು ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಡಿ .ವಾಯ್. ಎಸ್.ಪಿ ಸುಲ್ಪಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.