ಪ್ರತಿಯೊಂದು ಮನೆ ಮನೆಗೂ ಕಾನೂನು ಅರಿವು

ಚಿತ್ರದುರ್ಗ,ಅ.23;  ಪ್ರತಿಯೊಂದು ಮನೆ ಮನೆಗೂ ಕಾನೂನು ಅರಿವು ಗುರಿಯನ್ನು ಮುಟ್ಟುವವರೆಗೂ ಪ್ರಯತ್ನ ಮಾಡುವುದು ಕಾನೂನು ಸಾಕ್ಷರತಾ ಕಾರ್ಯಕ್ರಮದ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಗಿರೀಶ ಬಿ.ಕೆ. ಹೇಳಿದರು.
 ಚಿತ್ರದುರ್ಗ ತಾಲ್ಲೂಕಿನ ತುರುವನೂರಿನ ಗಣೇಶ ದೇವಸ್ಥಾನದ ಹತ್ತಿರ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ತುರುವನೂರು ಗ್ರಾಮ ಪಂಚಾಯಿತಿ ವತಿಯಿಂದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ “ಲೋಕ್ ಅದಾಲತ್ ಅನುಕೂಲಗಳು ಹಾಗೂ ಉಚಿತ ಕಾನೂನು ಅರಿವು ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಹಾಗೂ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 ಕಾನೂನು ರಚನೆಯಾಗಲು ನಾವುಗಳು ಮೂಲ ಕಾರಣ. ಏಕೆಂದರೆ ಭೂಮಿಯ ಮೇಲೆ ಬುದ್ಧಿವಂತ ಜೀವಿ ಮನುಷ್ಯ. ಕಾನೂನು ಮಾಡುವುದರ ಉದ್ದೇಶ ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡುವುದಾಗಿದೆ ಎಂದರು.
 ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯಿತಿಗಳು ಜನಸಾಮಾನ್ಯರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳು ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ತಲುಪಿಸುವಂತಹ ಕೆಲಸವಾಗಬೇಕು ಎಂದು ಹೇಳಿದರು.
ಜಾಥಾ ಕಾರ್ಯಕ್ರಮವು ತುರುವನೂರು ಗ್ರಾಮದ ಗಣೇಶ ದೇವಸ್ಥಾನ ಮುಂಭಾಗ ಬಸ್‍ಸ್ಟಾಂಡ್‍ನಿಂದ ಹಮ್ಮಿಕೊಳ್ಳಲಾಯಿತು. ಸಾರ್ವಜನಿಕರಿಗೆ ಕಾನೂನು ಅರಿವು ಹಾಗೂ ನೆರವಿನ ಮಾಹಿತಿ ನೀಡಲಾಯಿತು. ನಂತರ ಸಾರ್ವಜನಿಕರ ಸಮಸ್ಯೆ ಆಲಿಸಿ, ಸ್ಥಳದಲ್ಲಿಯೇ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸೂಚಿಸಲಾಯಿತು.
 ಶೌಚಾಲಯದ ಸಮಸ್ಯೆ ಕುರಿತು ಜನರು ಸಮಸ್ಯೆ ತಿಳಿಸಿದರು. ಅದಕ್ಕೆ ಪರಿಹಾರವಾಗಿ ಸಾರ್ವಜನಿಕ ಶೌಚಾಲಯಗಳನ್ನು ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿ ಲಭ್ಯವಿರುವ ಸ್ಥಳದಲ್ಲಿ ಮುಷ್ಟೂರು ರಸ್ತೆಯಲ್ಲಿರುವ ಅಂಗನವಾಡಿ ಹಿಂಭಾಗದಲ್ಲಿ ಹಾಗೂ ಗೊಲ್ಲರಹಟ್ಟಿ 2ನೇ ಬ್ಲಾಕ್ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಮೀಪದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸ್ಥಳಗಳನ್ನು ಗುರುತಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮಕೈಗೊಂಡು ವರದಿ ನೀಡಲು ತಿಳಿಸಲಾಯಿತು. ಶೌಚಾಲಯಗಳಿಗೆ ಕಾಂಪೌಂಡ್ ನಿರ್ಮಿಸಿ, ಸಿ.ಸಿ.ಕ್ಯಾಮೆರಾ ಅಳವಡಿಸಿ ನೀರಿನ ಸೌಲಭ್ಯವನ್ನು ಕಲ್ಪಿಸಲು ಸೂಚಿಸಲಾಯಿತು. ತಾತ್ಕಾಲಿಕವಾಗಿ ಏರ್‍ಪ್ರೆಶರ್ ಶೌಚಾಲಯಗಳನ್ನು ವ್ಯವಸ್ಥೆ ಮಾಡಲು ತಿಳಿಸಲಾಯಿತು.
 ತುರುವನೂರು ಗ್ರಾಮದ ನೀರಿನ ಟ್ಯಾಂಕ್  ಬಳಿ ಕೊಳಚೆ ನೀರು ನಿಂತು, ಸೊಳ್ಳೆಗಳು ಹೆಚ್ಚಾಗಿದ್ದು, ಆ ಪ್ರದೇಶದಲ್ಲಿ ಕೊಳಚೆ ನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲು ಸೂಚಿಸಲಾಯಿತು.
 ಪಡಿತರ ಚೀಟಿ ಆಹಾರವನ್ನು ನೀಡಲು, ಪಡಿತರ ಆಹಾರವನ್ನು ಸರಬರಾಜು ಮಾಡುವ ಸಂಘದವರು, ಪ್ರತಿ ಪಡಿತರ ಚೀಟಿದಾರರಿಂದ ರೂ.10/-ಗಳನ್ನು ಪಡೆಯುತ್ತಾರೆ ಎಂದು ಸಾರ್ವಜನಿಕರು ದೂರು ನೀಡಿದರು. ವಸತಿ ರಹಿತರು ಅರ್ಜಿ ನೀಡಿ ಮನೆಗಳನ್ನು ಕೊಡಿಸಬೇಕು ಎಂದು ಮನವಿ ಮಾಡಿದರು.
ವಕೀಲರಾದ ಟಿ.ಜಯಣ್ಣ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್, ಉಪಾಧ್ಯಕ್ಷ ಜಿ.ಸಿ.ದಯಾನಂದ, ಪ್ರಧಾನಕಾರ್ಯದರ್ಶಿ ಎಂ.ಮೂರ್ತಿ ಸೇರಿದಂತೆ 120ಕ್ಕೆ ಹೆಚ್ಚು ಜನರು ಭಾಗವಹಿಸಿದ್ದರು.