ಪ್ರತಿಮೆ ಸ್ಥಾಪಿಸಲು ಒತ್ತಾಯ

ಹುಬ್ಬಳ್ಳಿ, ಸೆ 13: ಕನ್ನಡ ಚಕ್ರವರ್ತಿ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ ಹಾಗೂ ಬೆಂಗಳೂರಿನ ವಿಧಾನಸೌಧದ ಮುಂದೆ ಸ್ಥಾಪಿಸಬೇಕೆಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಮ್ಮಡಿ ಪುಲಕೇಶಿಯ ಒಂದೇ ಒಂದು ಪುತ್ಥಳಿ ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಸಾಹಸ, ಸಾಧನೆ, ಸೌಹಾರ್ದ, ಸಾಮರಸ್ಯ ಕರುನಾಡ ಮನೆ, ಮನಗಳಿಗೆ ತಿಳಿಸುವ ಉದ್ದೇಶದಿಂದ ದಿಗ್ವಿಜಯ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ವಿಧಾನಸೌಧ ಹಾಗೂ ಬಾದಾಮಿಯಲ್ಲೂ ಇಮ್ಮಡಿ ಪುಲಿಕೇಶಿ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಕನ್ನಡಿಗರಾದ ನಾವು ಕನ್ನಡ ಉಳಿಸಿ ಎಂದು ಕನ್ನಡಿಗರನ್ನೇ ಕೇಳಬೇಕಾದ ದುರ್ಗತಿ ಬಂದಿದೆ. ರಾಜ್ಯದಲ್ಲಿ ಮತ್ತೊಂದು ಬೃಹತ್ ಗೋಕಾಕ್ ಚಳವಳಿ ನಡೆಸುವ ಅವಶ್ಯವಿದೆ. ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಪರಭಾಷಿಕರು ನಿರಂತರವಾಗಿ ದೌರ್ಜನ್ಯ, ಪುಂಡಾಟಿಕೆ ನಡೆಸುತ್ತಿದ್ದಾರೆ. ರಾಜ್ಯದಾದ್ಯಂತ ಕನ್ನಡಿಗರನ್ನು ಜಾಗೃತಗೊಳಿಸಲು ಇಮ್ಮಡಿ ಪುಲಿಕೇಶಿ ದಿಗ್ವಿಜಯ ಯಾತ್ರೆಯನ್ನು 13 ಜಿಲ್ಲೆಗಳಲ್ಲಿ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಕನ್ನಡಿಗರಿಗೆ ಉದ್ಯೋಗದ ಕೊರತೆ ಸೃಷ್ಟಿಸುತ್ತಿರುವುದು, ಅನ್ಯ ಭಾಷೆಯಲ್ಲಿ ವ್ಯವಹಾರಿಕ ಪ್ರಜ್ಞೆ ಮತ್ತು ಆಡಳಿತ ಪ್ರಜ್ಞೆಯನ್ನು ಯಥೇಚ್ಛಗೊಳಿಸಿ ಕನ್ನಡಿಗರು ಭಾಷಾ ವಲಸಿಗರಾಗಿ ನಿಲ್ಲುವಂತೆ ಸನ್ನಿವೇಶ ಸೃಷ್ಟಿಸಲಾಗಿದೆ. 75 ವರ್ಷದಿಂದ ಆಳಿದ ಕೇಂದ್ರ ಸರ್ಕಾರಗಳು ಕರ್ನಾಟಕದ ಮೇಲೆ ಮಲತಾಯಿ ಧೋರಣೆ ತೋರಿಸುತ್ತಲೇ ಬರುತ್ತಿದ್ದಾರೆ. ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಕಾಯ್ದೆಯಾಗಿ ಜಾರಿಗೆ ತರಲು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ. ದೇವನಹಳ್ಳಿ ದೇವರಾಜು, ಗದಗ ಜಿಲ್ಲಾಧ್ಯಕ್ಷ ವಿಜಯಕುಮರ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಸಿ.ಶಿವಪ್ಪ ಚಿಕ್ಕಬಳ್ಳಾಪುರ, ಪರಶುರಾಮ ವಿಠ್ಠಲ, ರಾಮು ಮಂಡ್ಯ ಸೇರಿದಂತೆ ಮುಂತಾದ ಪದಾಧಿಕಾರಿಗಳು ಇದ್ದರು.