ಪ್ರತಿಭೆ ಯಾರ ಸ್ವತ್ತಲ್ಲ : ದ್ಯಾವಪ್ಪನಾಯಕ

ಮೈಸೂರು, ನ.22: ಇಂದಿನ ಯುವ ಜನತೆಯಲ್ಲಿ ಕಂಡು ಬರುವ ಪ್ರತಿಭೆಯು ಯಾರ ಸ್ವತ್ತೂ ಅಲ್ಲ. ಬದಲಾಗಿ ಅದು ಅವರ ಸತತ ಪ್ರಯತ್ನದಿಂದ ಬಂದದ್ದಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ ಅಭಿಪ್ರಾಯ ಪಟ್ಟರು.
ಅವರು ಇಂದು ಬೆಳಿಗ್ಗೆ ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ರೋಟರಿ ಸಂಸ್ತೆ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ನಾಯಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಸಕ್ತ ಯುವ ಜನತೆಯಲ್ಲಿ ಒಬ್ಬರಲ್ಲಿರುವ ಪ್ರತಿಭೆ ಮತ್ತೊಬ್ಬರಲ್ಲಿ ಕಂಡು ಬರುವುದಿಲ್ಲ. ಪ್ರತಿಭೆಯು ತಾನಾಗಿ ಬರುವುದಿಲ್ಲ. ಅದು ಸತತ ಪ್ರಯತ್ನದಿಂದ ಮಾತ್ರ ಪಡೆಯಲು ಸಾಧ್ಯ ಎಂದು ಹೇಳಿದ ದ್ಯಾವಪ್ಪನಾಯಕ ಭವಿಷ್ಯದಿಂದ ನೀವು ಮತ್ತಷ್ಟು ಹೆಚ್ಚಿನ ಪ್ರಗತಿ ಹೊಂದುವಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರತಿಭಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದಅರು.
ಇದೇ ಸಂದರ್ಭದಲ್ಲಿ ಅವರು ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ನಾಯಕ ಜನಾಂಗದ ವಿದ್ಯಾರ್ಥಿಗಳಿಗೆ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಐ.ಸಿ.ಎ.ಆರ್. ಪರೀಕ್ಷೆಯಲ್ಲಿ ಪ.ಪಂಗಡ ವಿಭಾಗದಲ್ಲಿ3ನೇ ರ್ಯಾಂಕ್ ಪಡೆದ ನಂಜನಗೂಡು ತಾಲ್ಲೂಕು ಬೊಕ್ಕಳ್ಳಿ ಗ್ರಾಮದ ವಿದ್ಯಾರ್ಥಿನಿ ಕು.ಹರ್ಷಿತಾ ನಾಯಕ್ ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಮೈಸೂರು ಜಿ.ಪಂ. ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಲಂಗಿ ಸುರೇಶ್, ದುಂಡಯ್ಯ, ಪ್ರಾಧ್ಯಾಪಕ ಮಂಜುನಾಥ, ಡಾ.ಹೆಚ್.ಪಿ. ಮಂಜುನಾಥ್, ಸದಾಶಿವಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾ ನಾಯಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ನಾಗಲಿಂಗಪ್ಪ ವಹಿಸಿದ್ದರು.