ಬಾದಾಮಿ,ಜೂ12: ಕನ್ನಡ ಸಾಹಿತ್ಯ ಪರಿಷತ್ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಸಾಹಿತ್ಯಿಕ ಚಟುವಟಿಕೆಗಳ ಜೊತೆಗೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕಾ ಕಸಾಪ ಘಟಕದ ವತಿಯಿಂದ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಗರಿಷ್ಟ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಾಹಿತಿಗಳು ಸಮಾಜದ ಅಂಕು ಡೊಂಕು ತಿದ್ದುವ ಮೂಲಕ ಪ್ರತಿಭೆಗಳನ್ನು ಗುರುತಿಸುವ ವೇದಿಕೆ ನಿರ್ಮಾಣ ಮಾಡಿ ಗುರುತಿಸುತ್ತಿರುವುದು ತುಂಬಾ ಒಳ್ಳೆಯ ಕಾರ್ಯ. ಪ್ರತಿಭಾವಂತರ ಪ್ರತಿಭೆ ಇನ್ನು ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ನನ್ನಿಂದ ಸಹಾಯ ಸಹಕಾರ ಬೇಕಾದರೆ ನಾನು ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಾದಾಮಿ ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಆಶಯ ನುಡಿಗಳನ್ನಾಡಿದರು. ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು. ಮಾಜಿ ಜಿ.ಪಂ.ಉಪಾಧ್ಯಕ್ಷ ಹನಮಂತ ಮಾವಿನಮರದ, ರಾಜ್ಯ ಎಸ್.ಎಲ್.ಡಿ.ಪಿ.ಉಪಾಧ್ಯಕ್ಷ ಮಹಾಂತೇಶ ಮಮದಾಪೂರ ಮಾತನಾಡಿ ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಿರುವ ಕಸಾಪ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಪುರಸಭೆ ಸದಸ್ಯರಾದ ಮಂಜುನಾಥ ಹೊಸಮನಿ, ಶಂಕರ ಕನಕಗಿರಿ, ಕಸಾಪ ಗೌರವ ಕಾರ್ಯದರ್ಶಿ ಸಿ.ಎಂ.ಕಾಳನ್ನವರ, ಗೌರವ ಕೋಶಾಧ್ಯಕ್ಷ ಸಿ.ಎಂ.ಜೋಶಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿಶ್ರಾಂತ ಸಹನಿರ್ದೇಶಕ ಬಿ.ಎಚ್.ಗೋನಾಳ, ನಿವೃತ್ತ ಪ್ರವಾಚಕ ಎನ್.ಬಿ.ಗೊರವರ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಫ್.ಹೊರಕೇರಿ ಸ್ವಾಗತಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು. ಆರ್.ಎಂ.ಸಾರವಾಡ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.