ಬೀದರ್: ಸೆ.21:ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಇಲಾಖೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅವುಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡರೆ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಈ ಎಲ್ಲ ಕಾರ್ಯ ಯೋಜನೆಗಳ ಅನುಷ್ಠಾನದಲ್ಲಿ ಶಿಕ್ಷಕರ ಯೋಗದಾನ ಮುಖ್ಯವಾದುದು ಎಂದು ಕೋಳಾರ ಕೆ. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಕುಮದಾ ತಿಳಿಸಿದರು.
ಅವರು ಬೀದರ ತಾಲ್ಲೂಕಿನ ಕೋಳಾರ ಕೆ. ವಲಯದ ರಾಮಸ್ವಾಮಿ ಪೆರಿಯಾರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಹುದುಗಿರುವ ಪ್ರತಿಭಾಶಕ್ತಿ ಹೊರಹೊಮ್ಮಲು ಕಲೋತ್ಸವದಂತಹ ಚಟುವಟಿಕೆಗಳು ಸೂಕ್ತ ವೇದಿಕೆಗಳಾಗಿವೆ, ಅವುಗಳನ್ನು ವ್ಯವಸ್ಥಿತವಾಗಿ ಆಯೋಜಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಧನರಾಜ ಗುಡಮೆ ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರಶಾಂತ ಶರಗಾರ ಅವರು ಶೈಕ್ಷಣಿಕ ಸೇವೆಗೆ, ಭೌತಿಕ ಸೌಲಭ್ಯಗಳನ್ನು ಒದಗಿಸಿಕೊಡುವುದರೊಂದಿಗೆ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ಅವಶ್ಯಕವಾದ ವಾತಾವರಣ ನಿರ್ಮಾಣಕ್ಕೆ ಗ್ರಾಮ ಪಂಚಾಯತಿಯ ಮುಖಾಂತರ ಸಹಕಾರ ನೀಡುವುದಾಗಿ ಹೇಳಿದರು.
ಶಿಕ್ಷಣ ಇಲಾಖೆಯ ಕಾರ್ಯ ಯೋಜನೆಗಳು ಫಲಪ್ರದವಾಗಬೇಕಾದರೆ ಶಿಕ್ಷಕರ ಯೋಗದಾನ ಮುಖ್ಯವಾದುದು. ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಶೈಕ್ಷಣಿಕ ಚಿಂತನ ಮಂಥನಗಳಿಂದ ಜ್ಞಾನವೃದ್ಧಿಯಾಗುವುದಲ್ಲದೆ ಪ್ರತಿಭಾ ವಿಕಾಸಕ್ಕೆ ಕಲೋತ್ಸವದಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಗೋಪಾಳರಾವ ಪಡವಳಕರ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಿದ್ರಾಮ ನಿಜಾಂಪುರ ಮಾತನಾಡುತ್ತ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆ ಅವಕಾಶಗಳು ಸಿಗುತ್ತಿಲ್ಲ. ಅದಕ್ಕಾಗಿ ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿರುವ ಶಿಕ್ಷಕರಿಗೂ, ವರ್ಗಾವಣೆಗೊಂಡಿರುವ ಶಿಕ್ಷಕರಿಗೆ ಸ್ವಾಗತ ಮತ್ತು ಬೀಳ್ಕೊಡುಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಮಹ್ಮದ ಪಟೇಲ, ಕಾವೇರಿ ಸ್ವಾಮಿ, ಅನುಪಮಾ ಡಾ. ಅಮರ ಏರೋಳಕರ್, ಮುಖ್ಯಗುರುಗಳಾದ ಸುಮತಿ ರುದ್ರ, ಚೆಂದ್ರಮ್ಮ, ಸುಲೋಚನಾ, ಸುರೇಖಾ ಕನ್ನಾ, ರವಿ ಶಂಭು, ರೋಹಿತ್ ಮೈಂದೆ, ನಿರ್ಮಲಾದೇವಿ, ದಿಲೀಪಕುಮಾರ, ನಾಗವೇಣಿ, ಚಂದ್ರಕಲಾ, ಸೇರಿದಂತೆ ಸಹಶಿಕ್ಷಕರು ಭಾಗವಹಿಸಿದ್ದರು. ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ನೂರಾರು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಕಲೋತ್ಸವಕ್ಕೆ ಮೆರಗು ತಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಡಾ. ರಘುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಶೆಟ್ಟಿ ಗಾದಗೆ ನಿರೂಪಿಸಿದರು. ಇಲೇಶಕುಮಾರ ವಂದನಾರ್ಪಣೆ ಸಲ್ಲಿಸಿದರು.