ಪ್ರತಿಭಾ ಪುರಸ್ಕಾರ

ಹರಪನಹಳ್ಳಿ ಏ 03 : ಉಪ್ಪಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಿದ ಬಳಿಕ ನಮ್ಮ ಜನಾಂಗ ಹೋರಾಟಗಳ ಬಗ್ಗೆ ತೀರ್ಮಾನಿಸಲಿದೆ ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ತಿಳಿಸಿದ್ದಾರೆ.
ಪಟ್ಟಣದ ಮೇಗಳ ಉಪ್ಪಾರಗೇರಿ ಉಪ್ಪಾರ ಸಮುದಾಯ ಭವನದಲ್ಲಿ ತಾಲ್ಲೂಕು ಉಪ್ಪಾರ ಸಂಘ, ಉಪ್ಪಾರ ನೌಕರರ ಸಂಘ ಹಾಗೂ ಉಪ್ಪಾರ ಯುವಕರ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಸಕ ಜಿ. ಕರುಣಾಕರ ರೆಡ್ಡಿ ಮಾತನಾಡಿ, ಉಪ್ಪಾರ ಸಮಾಜ ಭವನಕ್ಕೆ ಸರ್ಕಾರದಿಂದ 2 ಕೋಟಿ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸುತ್ತೇನೆ. ಮುಂಬರುವ ಚುನಾವಣೆಗಳಲ್ಲಿ ಉಪ್ಪಾರ ಸಮಾಜಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ. ಗಿರೀಶ್ ಮಾತನಾಡಿ ಉಪ್ಪಾರ ಜನಾಂಗವನ್ನು ಬೀದರ್‌ ನಿಂದ ಚಾಮರಾಜನಗರದವರೆಗೂ ಸಂಘಟಿಸಲು ಶೀಘ್ರ ಚಾಲನೆ ಕೊಡುವುದಾಗಿ ತಿಳಿಸಿದರು.
ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾದ್ಯಕ್ಷ ಡಾ.ಉಮೇಶಬಾಬು ಮಾತನಾಡಿ, ಉಪ್ಪಾರ ಜನಾಂಗದ ಮೂವರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುನಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಗೆ,ಸಮುದಾಯದ ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ,ತಾಲ್ಲೂಕಿನ ನೌಕರರಿಗೆ, ವಿಶೇಷ ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕಿ ಸುಭದ್ರಾ ಮಾಡ್ಲಿಗೇರಿ ಉಪನ್ಯಾಸ ನೀಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಹನುಮಂತಪ್ಪ, ಪುರಸಭೆ ಸದಸ್ಯ ಗೊಂಗಡಿ ನಾಗರಾಜ, ನೌಕರರ ಸಂಘದ ಅಧ್ಯಕ್ಷ ಎಂ. ರಮೇಶ, ಯುವಕ ಸಂಘದ ಅಧ್ಯಕ್ಷ ಎಸ್. ರಾಜೇಂದ್ರ, ಸಮುದಾಯದ ಮುಖಂಡರಾದ ಕೆ. ವೆಂಕಟೇಶ್, ಎನ್. ತಿಪ್ಪಣ್ಣ, ಎನ್.ಎಸ್. ಚಂದ್ರಪ್ಪ, ಎನ್.ಬಿ. ಲೋಕೇಶ್, ಈಶಪ್ಪ, ಪಿ. ಗಣೇಶ, ಹನುಮಂತಪ್ಪ, ಮಂಜುನಾಥ, ಇತರರು ಇದ್ದರು.