ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ

ಅಥಣಿ:ಆ.10: ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಸತತ ಅಧ್ಯಯನ, ಗುರಿ ಸಾಧಿಸುವ ಛಲ ಹೊಂದಿದಾಗ ಜೀವನದಲ್ಲಿ ಯಶಸ್ವಿ ಹೊಂದಲು ಸಾಧ್ಯವಿದೆ ಎಂದು ಗಂಗಾಮತ ಸಮಾಜ ಸಂಘದ ಮಾಜಿ ಜಿಲ್ಲಾಧ್ಯಕ್ಷ ಗಂಗಾರಾಮ ತಳವಾರ ಹೇಳಿದರು.
ಅವರು ಗಂಗಾಮತಸ್ಥರ ಕೋಳಿ ಸಮಾಜ ಸಂಘ, ಚಿಕ್ಕೋಡಿ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರ ಜೀವನದಲ್ಲಿ ಸಾಧನೆಗೆ ಬಡತನ ಮತ್ತು ಅಂಗವಿಕಲತೆ ಅಡ್ಡಿಯಲ್ಲ, ಬಡತನ ಮತ್ತು ಅಂಗವಿಕಲತೆಯ ಕೀಳರಮೆಯ ಭಾವನೆಯನ್ನು ಬಿಟ್ಟು ತಮ್ಮ ಬದುಕಿನಲ್ಲಿ ಸತತ ಪ್ರಯತ್ನ ಮಾಡಿ ಸಾಧನೆ ಮಾಡಿದ ಸಾಧಕರ ನಿದರ್ಶನಗಳು ನಮ್ಮ ಮುಂದೆ ಇವೆ. ಆತ್ಮವಿಶ್ವಾಸದಿಂದ ನಮ್ಮ ಗುರಿ ಸಾಧನೆಗೆ ನಮ್ಮ ಪ್ರಯತ್ನ ಇರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನದಲ್ಲಿ ನಿರತರಾಗಬೇಕು ಎಂದು ಸಲಹೆ ನೀಡಿದರು.
ಸಮಾರಂಭವನ್ನು ಉದ್ಘಾಟಿಸಿದ ಗಂಗಾಮತಸ್ಥರ ಸಮಾಜ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿ ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿಕೊಡುವುದು ಬಹಳ ಮುಖ್ಯವಾಗಿದೆ. ಉತ್ತಮ ಸಂಸ್ಕಾರವನ್ನ ಕಲಿತ ವ್ಯಕ್ತಿ ತನ್ನ ಕಾಯಕದ ಜೊತೆಗೆ ಸಮಾಜದ ಶಕ್ತಿಯಾಗಿ ಬೆಳೆಯುತ್ತಾನೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸತತ ಅಧ್ಯಯನ ನಿರಂತರ ಅಧ್ಯಯನ, ಸಾಧಿಸುವ ಛಲ, ಶ್ರದ್ಧೆ ಮತ್ತು ತಾಳ್ಮೆಗಳನ್ನು ರೂಡಿಸಿಕೊಳ್ಳಬೇಕು.ಐ.ಎ.ಎಸ್. ಐ.ಪಿ.ಎಸ್. ಕೆಎಎಸ್ ನಂತಹ ಅನೇಕ ಸ್ಪರ್ಧಾತ್ಮಕ ಪರಿಕ್ಷೆಯನ್ನು ಬರೆಯಲು ಬೆಳಗಾವಿಯಲ್ಲಿ ತರಬೇತಿ ಕೇಂದ್ರವನ್ನ ಆರಂಭಿಸಲಾಗಿದ್ದು,ಇಲ್ಲಿ ಬಡ ವಿಧ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಗಂಗಾಮತಸ್ಥರ ಕೋಳಿ ಸಮುದಾಯದ ವಿವಿಧ ಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಮುಂಬರುವ ಶೈಕ್ಷಣಿಕ ಜೀವನದಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಆತ್ಮವಿಶ್ವಾಸ ತುಂಬಲು ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಹಳಷ್ಟು ಸ್ಪೂರ್ತಿದಾಯಕವಾಗಿದೆ ಇದು ತೃತೀಯ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಎಂದು ಹೇಳಿದರು. ಜೀವನದಲ್ಲಿ ಗುರಿ ಮುಟ್ಟಿದ ಮೇಲೆ ತಮ್ಮ ತಂದೆ ತಾಯಿ ಮತ್ತು ಕಲಿಸಿದ ಗುರುಗಳಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ತಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನು ಸಮಾಜಮುಖಿ ಸೇವೆಗಳಿಗೆ ಮೀಸಲಿಡಬೇಕು. ಏಕೆಂದರೆ ನಾವೆಲ್ಲ ಸಮಾಜದ ಅವಿಭಾಜ್ಯ ಅಂಗ, ಅನೇಕ ಮಠಾಧೀಶರು ಮತ್ತು ಸಮಾಜ ಸೇವಕರು ಸಮಾಜಮುಖಿ ಕಾರ್ಯಗಳ ಮೂಲಕ ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ನಗರದ ಅಬಕಾರಿ ಅಧೀಕ್ಷಕ ವಿನೋದ ಡಂಗೆ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆ ಎ ಎಸ್ , ಕೆಪಿಎಸ್ ಸಿ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ನಿರಂತರ ಅಧ್ಯಯನ ಬಹಳ ಅಗತ್ಯ, ಶೃತಿ ಮತ್ತು ತಾಳ್ಮೆಯಿಂದ ಗುರಿ ಸಾಧನೆಗೆ ನಿರಂತರ ಪರಿಶ್ರಮ ಹಾಕಬೇಕು ಎಂದು ಸಲಹೆ ನೀಡಿದ ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸರಳವಾಗಿ ಎದುರಿಸುವ ವಿಧಾನಗಳನ್ನು ಪ್ರೊಜೆಕ್ಟ ಮೂಲಕ ವಿವರ ನೀಡಿದರು.
ಈ ವೇಳೆ ಸಾಹಿತಿ ಬಸವರಾಜ ಸುಣಗಾರ ಹಾಗೂ ಕಿಶೋರ ಶಿರಗೆ, ಉಪನ್ಯಾಸಕ ಮಹಾಂತೇಶ ನಿಟ್ಟೂರ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರಮೇಶ ಘಸ್ತಿ, ಯಲ್ಲಪ್ಪ ಡಿಗ್ಗಿ, ಆರ್ ಜಿ ಶಿವಬಸಣ್ಣವರ,ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ನಾರಾಯಣ ಆನಿಖಿಂಡಿ, ಎಸ್ ಸಿ ಗಂಗಾಪುರ, ಸಣ್ಣಪ್ಪ ಮೀಸಿ, ಲೀಲಾವತಿ ಬಾರಕೇರ,ವೀರಭದ್ರ ದುಂಡಗಿ, ಅಶೋಕ ಕಬ್ಬಲಿಗೇರ, ಪ್ರವೀಣ ಅಶೋಕ ಪಲ್ಲೆದ, ಫಕೀರಪ್ಪ ಎಚ್ ಜುಂಜನ್ನವರ, ಪ್ರಾಚಾರ್ಯ ದೀಪಕ ಶಿ ಗಸ್ತಿಯವರು ಉಪಸ್ಥಿತರಿದ್ದರು. ಸಾಹಿತಿ ಎಸ್ ಕೆ ಹೊಳೆಪ್ಪನವರ ಸ್ವಾಗತಿಸಿದರು. ಜೀವನ ಶಿರಗೆ ಪರಿಚಯಿಸಿದರು, ಕೈಲಾಸ ಮದಬಾವಿ ನಿರೂಪಿಸಿದರು. ದಿವ್ಯಾ ಎಂ ಹೊಳೆಪ್ಪನವರ ವಂದಿಸಿದರು.