ಪ್ರತಿಭಾ ಪುರಸ್ಕಾರ ಶ್ಲಾಘನೀಯ-ರಮೇಶ್‌ಕುಮಾರ್

ಕೋಲಾರ,ಏ.೪:ಮೊದಲ ಬಾರಿಗೆ ಪ್ರತಿಭಾ ಪುರಸ್ಕಾರ ನಡೆಸುವ ಉತ್ತಮ ಆಲೋಚನೆ ಮಾಡಿದ್ದೀರಿ, ಇದರ ಜತೆಗೆ ಮುಂದಿನ ದಿನಗಳಲ್ಲಿ ಧ್ವನಿ ಇಲ್ಲದವರ ಪರವಾಗಿಯೂ ನೌಕರರ ಸಂಘಟನೆ ಕೆಲಸ ಮಾಡಲಿ, ದಿಕ್ಕಿಲ್ಲದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನೂ ಆರಂಭಿಸಿ ಎಂದು ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ಕೆ.ಆರ್.ರಮೇಶ್‌ಕುಮಾರ್ ಕರೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸಂಘಟನೆ ಇರುವವರು ತಮ್ಮ ಸಮುದಾಯದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ ಆದರೆ ಡಾಂಬರು ಹಾಕುವ ದಿಕ್ಕಿಲ್ಲದವರ ಮಕ್ಕಳ ಪ್ರತಿಭೆ ಗುರುತಿಸುವವರು ಯಾರು, ಅವರನ್ನು ಗುರುತಿಸುವ ಮಾನವೀಯತೆ ಇಂದು ಅಗತ್ಯವಿದ್ದು, ಆ ಕಾರ್ಯ ಮುಂದಿನ ವರ್ಷದಿಂದ ನಿಮ್ಮಿಂದಲೇ ಆರಂಭವಾಗಲಿ ಎಂದು ಸಲಹೆ ನೀಡಿದರು.
ಜಾತಿ ದೃಷ್ಟಿಕೋನದಿಂದ ಶಿಕ್ಷಣ ಹೊರಬಾರದಿದ್ದರೆ ಆರೋಗ್ಯಕರ ದೇಶ ಕಟ್ಟಲು ಸಾಧ್ಯವೇ ಇಲ್ಲ ಎಂದ ಅವರು, ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ ಮತ್ತಷ್ಟು ಪ್ರತಿಭೆಗಳು ಬೆಳೆಯಲು ನೌಕರರ ಸಂಘ ಮುಂದಾಗಿರುವುದು ಶ್ಲಾಘನೀಯ ಎಂದರು.ನೌಕರರ ಸಂಘ ಎಂಬುದಕ್ಕಿಂತ ಸರ್ಕಾರಿ ಉದ್ಯೋಗಸ್ಥರ ಸಂಘ ಎಂದು ಇದ್ದರೆ ಸೂಕ್ತ ಎಂದು ಸಲಹೆ ನೀಡಿದ ಅವರು, ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ ಎಂದು ಕಿವಿಮಾತು ಹೇಳಿ, ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ನೌಕರರ ಸಂಘ ಉತ್ತಮ ಕಾರ್ಯಗಳಿಗೆ ನಾಂದಿಯಾಡಿದೆ, ಇದು ಮುಂದವರೆಯಲಿ ಎಂದು ಹಾರೈಸಿದರು.ಶಾಸಕ ಕೆ.ಶ್ರೀನಿವಾಸಗೌಡ ‘ಸಾಧನಾ ಪಥಪುಸ್ತಕ ಬಿಡುಗಡೆ ಮಾಡಿದರು.
ಉಪವಿಭಾಗಾಧಿಕಾರಿ ವಿ.ಸೋಮಶೇಖರ್, ನೌಕರರ ಸಂಘದ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಕ್ರಿಯಾಶೀಲ,ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ, ನೌಕರರ ಸಮಸ್ಯೆಗಳಿಗೂ ಸ್ಪಂದಿಸುತ್ತಿದೆ ಎಂದು ಅಭಿನಂದಿಸಿದರು.ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಉದಯಕುಮಾರ್, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಸುರೇಶ್‌ಬಾಬು ಆರಂಭಿಸಿದ್ದಾರೆ. ಷಡಕ್ಷರಿ ಮಾರ್ಗದರ್ಶನದಲ್ಲಿ ಸಂಘಟನೆ ಜಿಲ್ಲೆಯಲ್ಲಿ ಬಲಗೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿದರು.ಷಡಕ್ಷರಿ ನೇತೃತ್ವದಲ್ಲಿ ಸಂಘ ಕಳೆದ ಒಂದೂವರೆ ವರ್ಷದಲ್ಲಿ ಹಿಂದೆಂದೂ ಮಾಡದಷ್ಟು ಪ್ರಮಾಣದಲ್ಲಿ ನೌಕರರ ಹಿತ ರಕ್ಷಣೆಯ ಕೆಲಸ ಮಾಡಿದೆ ಎಂದು ತಿಳಿಸಿದರು.
ಜಿಲ್ಲಾ ಸಂಘ ಕ್ರಿಯಾಶೀಲವಾಗಿದ್ದು, ಜಂಟಿ ಸಮಾಲೋಚನಾ ಸಮಿತಿ ರಚನೆ, ಯಶಸ್ವಿ ಕ್ರೀಡಾಕೂಟ ನಡೆಸಿದ್ದು, ಕೊಲೆಯಾದ ತಹಸೀಲ್ದಾರ್ ಕುಟುಂಬಕ್ಕೆ ನೆರವು ಕೊಡಿಸಿದ್ದು ಮತ್ತಿತರ ಕಾರ್ಯ ಮಾಡಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ಸ್ವಾಗತಿಸಿ, ಬಿ.ಎ.ಕವಿತಾ,ಪ್ರವೀಣ್ ನಿರೂಪಿಸಿದ ಕಾರ್ಯಕ್ರಮದಲ್ಲಿ ೧೨೫ ಪ್ರತಿಭೆಗಳನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಪೌರಾಯುಕ್ತ ಶ್ರೀಕಾಂತ್, ಕೆಯುಡಿಎ ಸದಸ್ಯ ಅಪ್ಪಿನಾರಾಯಣಸ್ವಾಮಿ, ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ಕೆ.ಎನ್.ಮಂಜುನಾಥ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ,ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಉಪಾಧ್ಯಕ್ಷ ಪುರುಷೋತ್ತಮ್,ತಾಲ್ಲೂಕು ಅಧ್ಯಕ್ಷರುಗಳಾದ ಎಂ.ನಾಗರಾಜ್,ಬಿ.ಎಂ.ರವಿರೆಡ್ಡಿ, ಸಿ.ಅಪ್ಪಯ್ಯಗೌಡ, ವಿ.ಮುನೇಗೌಡ, ಕೆ.ಎನ್.ಅರವಿಂದ್, ಪದಾಧಿಕಾರಿಗಳಾದ ರವಿ,ಮಂಜುನಾಥ್, ಶಿವಕುಮಾರ್,ಕೋರ್ಟ್‌ಮುನಿಯಪ್ಪ,ಆನಂದ್,ಹರೀಶ್,ಪಿಡಿಒ ನಾಗರಾಜ್, ಮಧು,ನಾಗಮಣಿ, ಸುಬ್ರಮಣಿ,ಲೆಕ್ಕಪತ್ರ ಅನಿಲ್ ಸೇರಿದಂತೆ ಎಲ್ಲಾ ವೃಂದ ಜಿಲ್ಲಾ,ತಾಲ್ಲೂಕು ಸಂಘದ ಪದಾಧಿಕಾರಿಗಳು ಹಾಜರಿದ್ದರು.