ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಿಡಿದ ಕನ್ನಡಿ

ವಿಜಯಪುರ : ಆ.3:ಬಹುಜನ ದಲಿತ ಸಂಘರ್ಷ ಸಮಿತಿ, ಬೆಂಗಳೂರು ಜಿಲ್ಲಾ ಸಮಿತಿ, ವಿಜಯಪುರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಬುದ್ದ, ಬಸವ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಎಸ್.ಎಸ್.ಎಲ್.ಸಿ. / ದ್ವಿತಿಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಡಾ.ಸಂಜೀವಕುಮಾರ ಪೋತೆ ರವರು ರಚಿಸಿದ “ಬುದ್ದನ ತಾತ್ವಿಕ ನಿಲುವುಗಳು” ಎಂಬ” ಕೃತಿ ಬಿಡುಗಡೆ ಸಮಾರಂಭವು ಕಂದಗಲ್ ಹಣಮಂತ್ರಾಯ ರಂಗ ಮಂಧಿರದಲ್ಲಿ ನೇರವೇರಿಸಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ. ಎಮ್.ಎನ್. ರಮೇಶರವರು ರಾಜ್ಯಾದ್ಯಕ್ಷರು ಬಹುಜನ ಡಿ.ಎಸ್.ಎಸ್. ಹಾಗೂ ಉದ್ಘಾಟಕರಾಗಿ ಜನಪ್ರೀಯ ಶಾಸಕರು ಬಸವನಬಾಗೇವಾಡಿಯ ಶಿವಾನಂದ ಪಾಟೀಲ ಮಾತನಾಡಿ, ಈ ಸಂಘಟನೆಯು ವಿಶೇಷವಾಗಿದ್ದು, ಪ್ರತಿವರ್ಷ ಹಮ್ಮಿಕೊಳ್ಳುವ ಇಂತಹ ಅರ್ಥ ಪೂರ್ಣವಾದ ಕಾರ್ಯಕ್ರಮಗಳು ಮಕ್ಕಳಿಗೆ ಪ್ರೇರಣೆ ನೀಡುವುದಲ್ಲದೇ ಮುಂದಿನ ಸಾಧನೆಗೆ ಪ್ರೋತ್ಸಾಹ ಸಿಗುತ್ತದೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಸಂಜೀವಕುಮಾರ ಪೋತೆ ರವರು ತಾವು ರಚಿಸಿದ ” ಬುದ್ದನ ತಾತ್ವಿಕ ನಿಲುವುಗಳು ಬಗ್ಗೆ ವಿಶೇಷವಾದ ಉಪನ್ಯಾಸ ನೀಡಿದರು.
ಉತ್ತರ ಕರ್ನಾಟಕದ ಅಧ್ಯಕ್ಷರಾದ ರಾಜಶೇಖರ ಕುದರಿ ಮಾತನಾಡಿ, ಬಹುಜನ ದಲಿತ ಸಂಘರ್ಷ ಸಮಿತಿಯು ದಲಿತರ, ಹಿಂದುಳಿದವರ, ಮಹಿಳೆಯರ, ಸಂವಿಧಾನಿಕ ಹಕ್ಕು ಮತ್ತು ಸೌಲತ್ತುಗಳನ್ನು ಅನುಷ್ಠಾನಕ್ಕಾಗಿ ದಶಕಗಳಿಂದ ಪ್ರಾಮಾಣಿಕವಾಗಿ ಹೋರಾಟವನ್ನು ರೂಪಿಸಿ, ಹೋರಾಡುತ್ತಲೇ ಬಂದಿದೆ. ದಲಿತರ ಮೀಸಲಾತಿಯ ಹೋರಾಟ, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ, ದಲಿತರ ಮೇಲಿನ ದೌರ್ಜನ್ಯ ಖಂಡನೆ, ಮಹಿಳೆಯರ ಸಂರಕ್ಷಣೆ ಮತ್ತು ಸಾಮಾಜಿಕ ನ್ಯಾಯಪರತೆಯ ಮೇಲೆ ನಮ್ಮ ಸಂಘಟನೆಯ ಕೆಲಸ ಮಾಡುತ್ತಿದೆ. ಇಂದಿನ ಸಮಾಜದಲ್ಲಿ ಅಂತ್ಯವಿಲ್ಲದ ಶೋಷಣೆ ಹಾಗೂ ಕಿತ್ತು ತಿನ್ನುವ ಬಡತನ ದ್ಯೋತಗಳಾಗಿವೆ. ಸಮಕಾಲೀನ ಸಾಮಾಜಿಕ ವ್ಯವಸ್ಥೆ ಹದಗೆಡುತ್ತಿದೆ. ಹದಗೆಟ್ಟ ಸಾಮಾಜಿಕ ವ್ಯವಸ್ಥೆಯನ್ನು ಮುಚ್ಚಿಡುವ ವ್ಯರ್ಥ ಪ್ರಯತ್ನಗಳು ಈ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ನಮ್ಮ ಸಂಘಟನೆ ಇಂತಹ ಮುಚ್ಚಿಟ್ಟ ಸಾಮಾಜಿಕ ಸಮಸ್ಯೆಗಳನ್ನು ಹೊರಹಾಕುವ ನಿಷ್ಪಕ್ಷ ಪ್ರಯತ್ನ ಮಾಡುತ್ತಿದೆ ಎಂದರು.
ಮಾಜಿ ಶಾಸಕರು ಹಾಗೂ ಪ್ರದೇಶ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಪ್ರೊ. ರಾಜು ಆಲಗೂರ ಮಾತನಾಡಿ, ಇಂದಿನ ಮಕ್ಕಳು ಭವ್ಯ ಭಾರತದ ನಿಮಾರ್ತೃಗಳು, ಇಂತಹ ಪುರಸ್ಕಾರ ಅವರಿಗೆ ಶ್ರೇಷ್ಠತೆಯನ್ನು ತಂದುಕೊಡುತ್ತದೆ ಪ್ರತಿಭಾ ಪುರಸ್ಕಾರ ನೀಡುವುದರಿಂದ ಮಕ್ಕಳಲ್ಲಿ ಓದಿನ ಕಡೆಗೆ ಹೆಚ್ಚಿನ ಒಲವು ಮತ್ತು ಪ್ರೋತ್ಸಾಹ ದೊರೆತಂತಾಗುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯಾ, ಸಮಾನತೆ, ಸಾಮರಸ್ಯ ಮತ್ತು ಸಹೋದರತೆಯ ಸಹಭಾಗಿತ್ವ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಾಗರಾಜ ಲಂಬು ವಕೀಲರು, ಅಭಿಷೇಕ ಚಕ್ರವರ್ತಿ,ರಾಜ್ಯಾದ್ಯಕ್ಷರು ಡಿ.ಎಸ್.ಎಸ್. (ಪರಿವರ್ತನೆ), ರಾಜಕುಮಾರ ಶಿಂದ್ರೆ ಅಧ್ಯಕ್ಷರು, ಬಸವರಾಜ ಕೌಲಗಿ, ಸುಧೀರ ಬೋಸಲೆ, ಸಂಗಮೇಶ ಜಾಧವ, ಶಿವರಾಜ ಯಂಭತ್ನಾಳ (ವಕೀಲರು), ಶ್ಯಾಮರಾವ ಶಿಂಗೆ, ಯಮನೂರಿ ಚಲವಾದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಬಹುಜನ ದಲಿತ ಸಂಘರ್ಷ ಸಮಿತಿ, ಯಮನಪ್ಪ ಗುಣಕಿ, ತುಕಾರಾಮ ಚಲವಾದಿ ಇನ್ನಿತರರು ಇದ್ದರು.