ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.13: ಮಕ್ಕಳು ತಮ್ಮಲ್ಲಿ ಅಡಗಿರುವ ಕಲೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಸರ್ಕಾರ 12ವರ್ಷಗಳ ಹಿಂದೆ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಕಾರ್ಯವಾಗಿದೆ  ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ತಮ್ಮಣ್ಣಗೌಡ ಪಾಟೀಲ್ ತಿಳಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸಿರುಗುಪ್ಪ ಕ್ಲಸ್ಟರ್‍ನ 6ನೇ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಂತದಿಂದ ಪ್ರೌಢಶಾಲೆ ವರೆಗೆ ನಡೆಯುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ತಮ್ಮಲ್ಲಿರುವ ವಿವಿಧ ಕಲೆಗಳನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತರ, ಪೌರಾಣಿಕ, ಐತಿಹಾಸಿಕ, ವಿಜ್ಞಾನಕ್ಕೆ ಸಂಬಂಧಿಸಿದ, ಸಾಕ್ಷರತೆ, ಪರಿಸರಕ್ಕೆ ಸಂಬಂಧಿಸಿದ ವಿವಿಧ ವೇಷಗಳನ್ನು ತೊಟ್ಟು ವೇದಿಕೆಯ ಮೇಲೆ ತಮ್ಮ ಕಲೆಯನ್ನು ಪ್ರದರ್ಶಿಸಿದರು.
ಏಕಪಾತ್ರ ಅಭಿನಯ, ಭಾಷಣ, ಆಶು ಭಾಷಣ, ಕಥೆ ಹೇಳುವ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.0
ಮುಖ್ಯಗುರು ಎಂ.ಲಕ್ಷ್ಮಿಕಾಂತರೆಡ್ಡಿ, ಇ.ಸಿ.ಒ.ಗಳಾದ ಚನ್ನಬಸವನಗೌಡ, ಬಸವರಾಜಯ್ಯಸ್ವಾಮಿ, ಸಿ.ಆರ್.ಪಿ.ಗಳಾದ ಕೆ.ಗಜೇಂದ್ರ, ರುದ್ರವೇಣಿ, ವೀರೇಶ್, ಕಾಳಿಂಗಪ್ಪ, ಮಾರುತಿ, ಮಂಜುನಾಥ, ಆರ್.ಡಿ.ಮಲ್ಲಿಕಾರ್ಜುನ ಮತ್ತು ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.