
ಕೋಲಾರ, ಆ,೩೧: ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಅಮರಜ್ಯೋತಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಡಿ.ಮುನಿಯಪ್ಪ ತಿಳಿಸಿದರು.
ತಾಲೂಕಿನ ಖಾದ್ರಿಪುರ ಗ್ರಾಮದಲ್ಲಿರುವ ಅಮರಜ್ಯೋತಿ ಪಬ್ಲಿಕ್ ಶಾಲೆ ಆವರಣದಲ್ಲಿ ಕೊಂಡರಾಜನಹಳ್ಳಿ ಕ್ಲಸ್ಟರ್‌ನ ಎಲ್ಲಾ ಶಾಲೆಗಳ ಒಗ್ಗಟ್ಟಿನಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು.
ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಆಧುನಿಕ ಯುಗದಲ್ಲಿ ಸ್ಪರ್ಧೆ ಎದುರಿಸಿ ಬದುಕು ಕಟ್ಟಿಕೊಳ್ಳುವುದರ ಜತೆಗೆ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳುವುದು ಅಗತ್ಯ ಎಂದರು.ಶಿಕ್ಷಕ ಸುಬ್ರಮಣಿ ಮಾತನಾಡಿ ಮಕ್ಕಳಲ್ಲಿ ಯಾವ ಪ್ರತಿಭೆ ಅಡಗಿದೆ ಎಂಬುದು ಇಂತಹ ಕಾರ್ಯಕ್ರಮಗಳ ಮೂಲಕ ಅನಾವರಣಗೊಳ್ಳುತ್ತದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಹೆಸರುಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಸಿಆರ್ ಪಿಗಳಾದ ಸುರೇಶ್, ವೆಂಕಟಾಚಲಪತಿ, ಶಿಕ್ಷಕರಾದ ಸೌಮ್ಯ, ಶಂಕರೇಗೌಡ, ಜಗನ್ನಾಥ್, ಶ್ರೀರಾಮ್, ಫಯಾಜ್ ಅಹಮದ್, ಸುಧಾ, ಜಯಲಕ್ಷ್ಮಿ, ನಾರಾಯಣಮ್ಮ ಹಾಗೂ ಅಮರಜ್ಯೋತಿ ಪಬ್ಲಿಕ್ ಶಾಲೆಯ ಶಿಕ್ಷಕರು ಸಿಬ್ಬಂದಿ ಹಾಜರಿದ್ದರು. ವಿವಿಧ ಶಾಲೆಗಳಿಂದ ಆಗಮಿಸಿದ್ದ ಚಿಣ್ಣರು ವಿವಿಧ ವಿಭಾಗಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.