ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಕೋಚಿಂಗ್

ರಾಯಚೂರು,ಅ.೩೦- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಬ್ರಾಹ್ಮಣ ಸಮಾಜದ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ಮತ್ತು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್ ಕೋಚಿಂಗ್ ನೀಡಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಜಗನ್ನಾಥ ಕುಲಕರ್ಣಿ ಹೇಳಿದರು.
ಅವರಿಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ರಾಜ್ಯದ್ಯಂತ ಐಎಎಸ್ ಮತ್ತು ಐಪಿಎಸ್ ಕೋಚಿಂಗ್‌ಗಾಗಿ ಒಟ್ಟು ೬೦೦ ಅರ್ಜಿಗಳು ಬಂದಿದ್ದು, ಈಗಾಗಲೇ ೧೬೦ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯ ಪ್ರಾರಂಭವಾಗಲಿದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರು ಬ್ರಾಹ್ಮಣರಿಗೆ ಶೇ.೧೦ ರಷ್ಟು ಮೀಸಲಾತಿ ನೀಡಿದ್ದು, ರಾಜ್ಯದಲ್ಲಿಯೂ ಸಹ ಅದನ್ನು ಅಳವಡಿಸಿಕೊಂಡು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರಲ್ಲಿ ಪಿಯುಸಿ, ಡಿಗ್ರಿ, ಎಂಬಿಎ, ಎಂಬಿಬಿಎಸ್ ಸೇರಿದಂತೆ ಇನ್ನಿತರ ಪದವಿ ಹಾಗೂ ಸ್ನಾತಕೋತ್ತರ ಪದವಿ ಮತ್ತು ಹೊರ ದೇಶದಲ್ಲಿ ಶಿಕ್ಷಣ ಪಡೆಯಲು ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಇದನ್ನು ಸಮಾಜದ ಅರ್ಹ ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಪ್ರಕಾಶ ಅಲಂಪಲ್ಲಿ, ವಿಜಯರಾವ್ ಕುಲಕರ್ಣಿ, ಪ್ರಸನ್ನ ಅಲಂಪಲ್ಲಿ, ನರಸಿಂಹಮೂರ್ತಿ, ಗೋಪಾಲಕೃಷ್ಣ ತಟ್ಟಿ, ವೆಂಕಟೇಶ ಕೋಲಾರ, ಮುರಳೀದರ ಕುಲಕರ್ಣಿ, ಸುರೇಶ ಕಲ್ಲೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.