ಪ್ರತಿಭಾನ್ವಿತರಿಗೆ ಸೂಕ್ತ ವೇದಿಕೆ ಅವಶ್ಯಕ


ಸಂಜೆವಾಣಿ ವಾರ್ತೆ
ಶಿವಮೊಗ್ಗ.ಫೆ.27; ಸೋಲು ಗೆಲುವಿಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಖಿನ್ನತೆ ಹಾಗೂ ಒತ್ತಡ ಕಡಿಮೆ ಮಾಡಲು ಸಂಗೀತ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.ನಗರದ ಮಥುರಾ ಪಾರಾಡೈಸ್‌ನಲ್ಲಿ ಕದಂಬ ಕರೋಕೆ ಗ್ರೂಪ್ ಉದ್ಘಾಟನೆ ಹಾಗೂ ಕರೋಕೆ ಚಿತ್ರಗೀತೆ, ಹಿಂದಿ ಗೀತೆಗಳ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಸಂಗೀತಕ್ಕೆ ರಾಗ ತಾಳಗಳ ಅರಿವಿನ ಜತೆಯಲ್ಲಿ ನಿರಂತರ ಅಭ್ಯಾಸ ಮುಖ್ಯ. ಉದಯೋನ್ಮುಖ ಕಲಾವಿದರು ಹಾಗೂ ಪ್ರತಿಭಾನ್ವಿತರಿಗೆ ಸೂಕ್ತ ವೇದಿಕೆ ನೀಡಬೇಕು ಎಂದು ತಿಳಿಸಿದರು.ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಲಾವಿದರಿದ್ದು, ಪ್ರತಿಭೆಯ ಅನಾವರಣದ ಮೂಲಕ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಸ್ಥಳೀಯ ಉತ್ಸಾಹಿ ಕಲಾವಿದರಿಗೆ ಹೊಸ ಹೊಸ ವೇದಿಕೆಗಳನ್ನು ಕಲ್ಪಿಸಬೇಕು ಎಂದರು.ಗಾಯಕ ಭದ್ರಾವತಿ ವಾಸು ಮಾತನಾಡಿ, ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ಜನ ಸ್ಪರ್ಧಿಗಳು ಭಾಗವಹಿಸಿದ್ದು, ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ಹಾಗೂ ಮುಂದಿನ ದಿನಗಳಲ್ಲಿ ವೇದಿಕೆ ಕಲ್ಪಿಸುವ ಕೆಲಸ ಸಂಸ್ಥೆಯಿAದ ಮಾಡಲಾಗುತ್ತದೆ ಎಂದು ಹೇಳಿದರು.ಕದಂಬ ಕರೋಕೆ ಗ್ರೂಪ್ ಅಧ್ಯಕ್ಷ ಬಿ.ಆರ್.ರವಿ ಚೌಹಾಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಸ್ಪರ್ಧೆಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು. ಗಾಯಕರಿಂದ ಕರೋಕೆಗಾಯನ ನಡೆಯಿತು. ಕದಂಬ ಕರೋಕೆ ಗ್ರೂಪ್‌ನ ಸುಮಿತ್ರಮ್ಮ, ವಾಣಿ, ತೀರ್ಪುಗಾರರಾದ ವಿದುಷಿ ಹೇಮ, ಲಲಿತಮ್ಮ ಮತ್ತಿತರರು ಉಪಸ್ಥಿತರಿದ್ದರು.ಸೋಲೋ ಹಾಡಿನ ಸ್ಪರ್ಧೆಯಲ್ಲಿ ಸುಮಿತ್ರ ಪ್ರಥಮ, ಶುಭ ಹರ್ಷ ದ್ವಿತೀಯ, ಹೇಮಂತ್ ಶೇಠ್ ತೃತೀಯ, ವಿಜಯ ಸಮಾಧಾನಕಾರ ಬಹುಮಾನ ಪಡೆದುಕೊಂಡರು. ಯುಗಳ ಗೀತೆಯಲ್ಲಿ ಸುಮಿತ್ರ ಹಾಗೂ ಹೇಮಂತ್ ಪ್ರಥಮ, ಮಥುರಾ ನಾಗರಾಜ್ ಹಾಗೂ ಆದ್ಯ ದ್ವಿತೀಯ, ಮಾರುತಿ ಶೇಠ್ ಹಾಗೂ ಪ್ರಿಯಾಂಕ ತೃತೀಯ, ಅನುಪ್ ಹಾಗೂ ಸುಮಾ ಸಮಾಧಾನ ಬಹುಮಾನ ಪಡೆದುಕೊಂಡರು.