ಪ್ರತಿಭಟನೆ ಹೆಸರಲ್ಲಿ ಮುಸ್ಲಿಂರ ವಿರುದ್ಧ ದ್ವೇಷದ ಪ್ರಚೋದನಕಾರಿ ಭಾಷಣ: ಆಕ್ರೋಶ

ತುಮಕೂರು, ಆ. ೧- ಕರಾವಳಿಯಲ್ಲಿ ನಡೆದ ಯುವಕರ ಕೊಲೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಬದಲು ಸರ್ಕಾರ ರಾಜ್ಯದಾದ್ಯಂತ ಪ್ರತಿಭಟನೆಯ ಹೆಸರಿನಲ್ಲಿ ಮುಸ್ಲಿಂರ ವಿರುದ್ದ ದ್ವೇಷದ ಪ್ರಚೋದನಕಾರಿ ಭಾಷಣಕ್ಕೆ ಅವಕಾಶ ನೀಡಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಅತೀಕ್ ಅಹಮದ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ. ಕರಾವಳಿಯಲ್ಲಿ ಒಂದೇ ವಾರದಲ್ಲಿ ಮೂವರು ಯುವಜನರು ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಅವರು ಯಾರೇ ಆಗಿರಲಿ, ಯಾವುದೇ ಕೋಮಿಗೆ ಸೇರಿದವರಾಗಿರಲಿ, ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಆಗ್ರಹವಾಗಿದೆ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ನಡೆಸುವ ಪ್ರತಿಭಟನೆಗಳಲ್ಲಿ ಮುಸ್ಲಿಂರ ವಿರುದ್ದ ಪ್ರಚೋದನಕಾರಿ ಭಾಷಣಕ್ಕೆ ಅವಕಾಶ ಕಲ್ಪಿಸಿ, ಉರಿಯುತ್ತಿರುವ ಬೆಂಕಿಗೆ ತಪ್ಪು ಸುರಿಯುವ ಕೆಲಸಕ್ಕೆ ಅವಕಾಶ ಮಾಡಿಕೊಟ್ಟಿರುವುದು ಖಂಡನೀಯ ಎಂದರು.
ಕಳೆದ ಕೆಲ ದಿನಗಳಿಂದ ಕರಾವಳಿ ಪ್ರದೇಶದಲ್ಲಿ ಒಂದಿಲ್ಲೊಂದು ವಿಚಾರದಲ್ಲಿ ಕೋಮಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಇದನ್ನು ತಡೆಯವ ನಿಟ್ಟಿನಲ್ಲಿ ಕರಾವಳಿ ಭಾಗದ ಎಲ್ಲಾ ಕೋಮುಗಳ ಮುಖಂಡರ ಶಾಂತಿ ಸಭೆ ನಡೆಸಿ,ಯುವಕರು ದಾರಿ ತಪ್ಪದಂತೆ,ಕೋಮು ಪ್ರಚೋಧನೆಗೆ ಒಳಗಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾದ ಸರಕಾರ, ಅದನ್ನು ಬಿಟ್ಟು,ಒಂದಕ್ಕೆ ಹತ್ತು ತಲೆ ಈ ರೀತಿಯ ಪ್ರಚೋಧನಾ ಭಾಷಣಗಳನ್ನು ಮಾಡಿಸುವ ಮೂಲಕ ಶಾಂತಿ, ಸೌಹಾರ್ಧತೆಯನ್ನು ಮತ್ತಷ್ಟು ಹದಗೆಡಿಸುವ ಕೆಲಸ ಮಾಡುತ್ತಿದೆ.ಸರಕಾರ ಈ ಕೂಡಲೇ ಒಂದು ಕೋಮಿನ ವಿರುದ್ದ ಪ್ರಚೋಧನಾಕಾರಿ ಭಾಷಣ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಸಹ ಸರಕಾರದ ವಿರುದ್ದ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದರು. ಅಲ್ಲದೆ ನಿರುದ್ಯೋಗ ಸಮಸ್ಯೆಯಿಂದ ಯುವಜನತೆ ಸರ್ಕಾರದ ವಿರುದ್ದ ಅಸಮಾಧಾನಗೊಂಡಿದ್ದರು. ಇದರತ್ತ ಗಮನಹರಿಸಬೇಕಾದ ಸರ್ಕಾರ ಇಂತಹ ಕೋಮು ಪ್ರಚೋಧನಾ ಭಾಷಣಗಳ ಮೂಲಕ ಜನಸಾಮಾನ್ಯರು, ಯುವಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಹೊರಟಿದೆ. ದೇಶದ ಅರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತಿದ್ದು, ಮತ್ತೊಂದು ಶ್ರೀಲಂಕಾ ಆಗುವ ಹಂತದಲ್ಲಿದೆ. ಈ ಬಗ್ಗೆ ಜನರ ಎಲ್ಲಿ ಸರಕಾರದ ವಿರುದ್ದ ತಿರುಗಿ ಬೀಳುತ್ತಾರೋ ಎಂಬ ಭಯದಲ್ಲಿ ಇಂತಹ ಕೃತ್ಯಗಳಿಗೆ ಉತ್ತೇಜನ ನೀಡುತ್ತಿದೆ ಎಂದು ದೂರಿದರು.
ಪ್ರಪಂಚದಾದ್ಯಂತ ಕೋವಿಡ್ ಮಹಾಮಾರಿಯಿಂದ ಹಿಂದು, ಮುಸ್ಲಿಂ, ಕ್ರೈಸ್ತ ಎನ್ನದೆ ಸಾವಿರಾರ ಹೆಣಗಳು ಬಿದ್ದಾಗ, ಇಂದು ಕೋಮ ಪ್ರಚೋಧನ ಭಾಷಣ ಮಾಡುವವರು ಎಲ್ಲಿ ಹೋಗಿದ್ದರು. ಕರಾವಳಿಯಲ್ಲಿ ಹೆಣವಾಗುತಿರುವವರು ದಲಿತರು, ಮುಸ್ಲಿಂರು, ಹಿಂದುಳಿದ ವರ್ಗದ ಯುವಕರು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪಿತಸ್ಥರ ವಿರುದ್ದ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು. ದೇಶದ ಅಭಿವೃದ್ದಿಯಲ್ಲಿ ಯುವಜನರು ತೊಡಗಿಸಿಕೊಳ್ಳುವಂತಹ ವಾತಾವರಣವನ್ನು ಸರ್ಕಾರಗಳು ಸೃಷ್ಟಿಸಬೇಕು ಎಂದು ಆಗ್ರಹಿಸಿದರು.