ಪ್ರತಿಭಟನೆ ಮುಂದಕ್ಕೆ

ಲಕ್ಷ್ಮೇಶ್ವರ,ನ21: ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಪಾಳಾ-ಬಾದಾಮಿ ರಸ್ತೆ ಸಂಪೂರ್ಣ ಗುಂಡಿ ಬಿದ್ದು ಹಾಳಾಗಿದೆ. ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಲಕ್ಷ್ಮೇಶ್ವರ ತಾಲ್ಲೂಕು ಪ್ರಗತಿಪರ ಹೋರಾಟ ಸಮಿತಿಯವರು ನವೆಂಬರ್ 21ರಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು, ಆದರೆ ಅಧಿಕಾರಿಗಳ ಭರವಸೆ ಮೇರೆಗೆ ಹೋರಾಟಗಾರರು ಪ್ರತಿಭಟನೆಯನ್ನು ಮುಂದಕ್ಕೆ ಹಾಕಿದ್ದಾರೆ.
ಈ ಕುರಿತು ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ ನಂದೆಣ್ಣವರ, ಬಸವರಾಜ ಹೊಗೆಸೊಪ್ಪಿನ, ಮಹೇಶ ಕಲಘಟಗಿ, ಲೋಕೇಶ ಸುತಾರ, ಸುರೇಶ ಹಟ್ಟಿ, ನೀಲಪ್ಪ ಶೆರಸೂರಿ, ಬಸವರಾಜ ಹಿರೇಮನಿ, ವಿಜಯ ಆಲೂರ ಮತ್ತಿತರರು ಹೋರಾಟಕ್ಕೆ ಅನುಮತಿ ನೀಡಬೇಕೆಂದು ಭಾನುವಾರ ಪೆÇಲೀಸ್ ಠಾಣೆಗೆ ಆಗಮಿಸಿದ್ದರು.
ಸಮಿತಿ ಅಧ್ಯಕ್ಷ ಸುರೇಶ ನಂದೆಣ್ಣವರ ಮಾತನಾಡಿ ರಸ್ತೆ ಹದಗೆಟ್ಟಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಅನೇಕರು ರಸ್ತೆ ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಆಗಲೇ ರಸ್ತೆ ದುರಸ್ತಿ ಮಾಡಿಸುವಂತೆ ಕರವೇ, ದಲಿತ ಸಂಘಟನೆ ಸೇರಿದಂತೆ ಮತ್ತಿತರ ಸಂಘಗಳು ಮನವಿ ಸಲ್ಲಿಸಿದ್ದವು. ಆದರೂ ಸಹ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದರಿಂದಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪರಶುರಾಮ ಸತ್ತಿಗೇರಿ, ಸಿಪಿಐ ವಿಕಾಸ ಲಮಾಣಿ, ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಪಿಎಸ್‍ಐ ಡಿ.ಪ್ರಕಾಶ ಲೋಕೋಪಯೋಗಿ ಇಲಾಖೆಯ ಮಾರುತಿ ರಾಠೋಡ ಅವರು ಪ್ರತಿಭಟನೆಕಾರರ ಮನವೊಲಿಸಿದರು.
ತಹಶೀಲ್ದಾರ ಪರಶುರಾಮ ಸತ್ತಿಗೇರಿ ಮಾತನಾಡಿ ಈಗಾಗಲೇ ರಾಜ್ಯ ಹೆದ್ದಾರಿ ದುರಸ್ತಿಗಾಗಿ ಕ್ರಮಕೈಗೊಳ್ಳಲಾಗಿದೆ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲಾಗಿದೆ. ಆದರೂ ಸಹ ಶಾಶ್ವತ ಪರಿಹಾರಕ್ಕಾಗಿ ಸರ್ಕಾರದಿಂದ 10 ಕೋಟಿ ರೂಪಾಯಿಗಳ ಅನುದಾನ ಬಂದಿದೆ. ಅದೂ ಸಹ ಟೆಂಡರ್ ಕರೆಯಲಾಗಿದೆ. ಕಾರಣ ಇನ್ನು ಸ್ವಲ್ಪು ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಅಲ್ಲಿಯವರೆಗೆ ಪುರಸಭೆ ವತಿಯಿಂದ ದಿನದಲ್ಲಿ ಮೂರು ಸಾರಿ ಧೂಳು ಏಳಬಾರದು ಎಂಬ ದೃಷ್ಟಿಯಿಂದ ನೀರು ಹೊಡೆಯಲು ಸೂಚಿಸಲಾಗಿದೆ ಎಂದರು.
ಅಧಿಕಾರಿಗಳ ಮಾತಿಗೆ ಬೆಲೆ ಕೊಟ್ಟು ಸಧ್ಯ ಪ್ರತಿಭಟನೆ ಹಿಂಪಡೆಯುತ್ತಿದ್ದೇವೆ. ಆದರೆ ಸಮಸ್ಯೆ ಬಗೆಹರಿಯದಿದ್ದರೆ ರಸ್ತೆ ತಡೆ ನಡೆದಿಸಿ ನಿರಂತರ ಹೋರಾಟ ಮಾಡಲಾಗುವುದು ಎಂದು ಸಮಿತಿ ಸದಸ್ಯರು ತಿಳಿಸಿದರು.